ಉದಯವಾಹಿನಿ, ಮೆಲ್ಬೋರ್ನ್ : ಆಸ್ಟ್ರೇಲಿಯಾದ ಸಿಡ್ನಿ ನಗರದಲ್ಲಿ ನಡೆದ ಭೀಕರ ಅಪಘಾತದಲ್ಲಿ ಭಾರತೀಯ ಮೂಲದ ಎಂಟು ತಿಂಗಳ ಗರ್ಭಿಣಿ ಮತ್ತು ಅವರ ಹೊಟ್ಟೆಯಲ್ಲಿದ್ದ ಮಗು ಸಾವನ್ನಪ್ಪಿದೆ.ಭಾರತೀಯ ಮೂಲದ ಟೆಕ್ಕಿಯೊಬ್ಬರು 33 ವರ್ಷದ ಸಮನ್ವಿತಾ ಧಾರೇಶ್ವರ್ ಕಳೆದ ಶುಕ್ರವಾರ ರಾತ್ರಿ 8 ಗಂಟೆಯ ನಂತರ ಹಾರ್ನ್ಸ್‌ಬೈನಲ್ಲಿರುವ ಜಾರ್ಜ್ ಸ್ಟ್ರೀಟ್‌ನಲ್ಲಿ ತಮ್ಮ ಪತಿ ಮತ್ತು ಮೂರು ವರ್ಷದ ಮಗನೊಂದಿಗೆ ರಸ್ತೆ ದಾಟುತ್ತಿದ್ದಾಗ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಹೊಟ್ಟೆಯಲ್ಲಿದ್ದ ಶಿಶುವಿನೊಂದಿಗೆ ಸಾವನ್ನಪ್ಪಿದ್ದಾರೆ.
ಇವರು ರಸ್ತೆ ದಾಟುವಾಗ ಕಿಯಾ ಕಾರು ಅವರಿಗೆ ರಸ್ತೆ ದಾಟಲು ಅವಕಾಶ ನೀಡಿ ನಿಂತಿತ್ತು. ಈ ವೇಳೆ ವೇಗವಾಗಿ ಬಂದ ಬಿಎಂಡಬ್ಲ್ಯೂ ಕಾರು, ಕಿಯಾ ಕಾರಿಗೆ ಡಿಕ್ಕಿ ಹೊಡೆದಿತ್ತು. ಬಿಎಂಡಬ್ಲ್ಯೂ ಕಾರು ಡಿಕ್ಕಿ ಹೊಡೆದ ರಭಸಕ್ಕೆ ನಿಂತಿದ್ದ ಕಿಯಾ ಕಾರು ಮಹಿಳೆಗೆ ಡಿಕ್ಕಿಯಾಗಿದ್ದರಿಂದ ಈ ದುರ್ಘಟನೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಅಲ್ಲಿನ 7ನ್ಯೂಸ್.ಕಾಮ್ ಈ ಸುದ್ದಿಯನ್ನು ವರದಿ ಮಾಡಿದೆ.
ಗಂಭೀರವಾಗಿ ಗಾಯಗೊಂಡ ಸಮನ್ವಿತಾ ಧಾರೇಶ್ವರಿ ಅವರಿಗೆ ತಕ್ಷಣಕ್ಕೆ ಆರೈಕೆ ನೀಡಿ ತುರ್ತು ಚಿಕಿತ್ಸೆಗೆ ವೆಸ್ಟ್‌ಮೀಡ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ಚಿಕಿತ್ಸೆ ಫಲಕಾರಿಯಾಗಲಿಲ್ಲ. ಧಾರೇಶ್ವರಿಯವರು ಇನ್ನೊಂದು ವಾರದಲ್ಲಿ ತಮ್ಮ ಎರಡನೇ ಮಗುವಿಗೆ ಜನ್ಮ ನೀಡಬೇಕಿತ್ತು.
ಧಾರೇಶ್ವರಿಯ ಲಿಂಕ್ಡಿನ್ ಪ್ರೋಫೈಲ್ ಪ್ರಕಾರ ಅವರು ಅಲಸ್ಕೊ ಯೂನಿಫಾರ್ಮ್ಸ್ನಲ್ಲಿ ಐಟಿ ಸಿಸ್ಟಂ ಅನಾಲಿಸ್ಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಕಾರು ಅಪಘಾತದದಲ್ಲಿ ಬಿಎಂಡಬ್ಲ್ಯೂ ಚಾಲನೆ ಮಾಡುತ್ತಿದ್ದ 19 ವರ್ಷದ ಚಾಲಕ ಹಾಗೂ ಕಿಯಾ ಕಾರು ಚಾಲನೆ ಮಾಡುತ್ತಿದ್ದ 48 ವರ್ಷದ ಚಾಲಕ ಗಾಯಗೊಂಡಿದ್ದು, ಈ ಎರಡೂ ಕಾರಿನಲ್ಲಿ ಯಾವುದೇ ಪ್ರಯಾಣಿಕರು ಇರಲಿಲ್ಲ.
