ಉದಯವಾಹಿನಿ, ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇದೇ ಮೊದಲ ಬಾರಿಗೆ ಶ್ವೇತ ಭವನದ ಓವಲ್ ಕಚೇರಿಯಲ್ಲಿ ಶುಕ್ರವಾರ ನ್ಯೂಯಾರ್ಕ್ ನಗರದ ಮೇಯರ್ ಜೋಹ್ರಾನ್ ಮಮ್ದಾನಿ ಅವರನ್ನು ಭೇಟಿಯಾಗಲಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಟ್ರಂಪ್, ಶ್ವೇತಭವನಕ್ಕೆ ಕಮ್ಯುನಿಸ್ಟ್ ಬರುತ್ತಿದ್ದಾರೆ. ಅಮೆರಿಕ ಜನರ ಪರವಾಗಿ ನಾನು ಅವರನ್ನು ಭೇಟಿ ಮಾಡುತ್ತೇನೆ ಎಂದು ತಿಳಿಸಿದ್ದಾರೆ. ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ಅವರು ಶ್ವೇತ ಭವನಕ್ಕೆ ನ್ಯೂಯಾರ್ಕ್ ನಗರದ ಮೇಯರ್ ಜೋಹ್ರಾನ್ ಮಮ್ದಾನಿ ಬರುತ್ತಿರುವುದನ್ನು ದೃಢಪಡಿಸಿದ್ದಾರೆ.
ಕ್ಯಾರೋಲಿನ್ ಲೀವಿಟ್ ಅವರು ಗುರುವಾರ ಪತ್ರಕರ್ತರೊಂದಿಗೆ ಮಾತನಾಡಿ, ನ್ಯೂಯಾರ್ಕ್ ನಗರದ ಚುನಾಯಿತ ಮೇಯರ್ ಜೋಹ್ರಾನ್ ಮಮ್ದಾನಿ ಅವರು ಶುಕ್ರವಾರ ಶ್ವೇತಭವನದ ಓವಲ್ ಕಚೇರಿಯಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಭೇಟಿಯಾಗಲಿದ್ದಾರೆ. ಚುನಾಯಿತ ಮೇಯರ್ ಓವಲ್ ಕಚೇರಿಗೆ ಬರುತ್ತಿರುವುದಾಗಿ ಅಧ್ಯಕ್ಷರೇ ಹೇಳಿದ್ದಾರೆ. ಅದಕ್ಕಾಗಿ ನಮ್ಮ ತಂಡಗಳು ನಿರ್ದಿಷ್ಟವಾದ ಕೆಲವೊಂದು ವ್ಯವಸ್ಥೆಗಳನ್ನೂ ಮಾಡುತ್ತಿವೆ. ಇದು ಶ್ವೇತಭವನಕ್ಕೆ ಕಮ್ಯುನಿಸ್ಟ್ ಬರುತ್ತಿದ್ದಾರೆ ಎಂದು ಹೇಳುತ್ತದೆ. ಯಾಕೆಂದರೆ ಡೆಮಾಕ್ರಟಿಕ್ ಪಕ್ಷವಿರುವ ದೇಶದ ಅತಿದೊಡ್ಡ ನಗರದ ಮೇಯರ್ ಆಗಿ ಅವರನ್ನು ಆಯ್ಕೆ ಮಾಡಿದೆ ಎಂದು ಅವರು ತಿಳಿಸಿದ್ದಾರೆ.
ಇವರಿಬ್ಬರ ಭೇಟಿ ತುಂಬಾ ಗಮನಾರ್ಹವಾಗಿದೆ. ಯಾಕೆಂದರೆ ಅಮೆರಿಕ ಅಧ್ಯಕ್ಷ ಟ್ರಂಪ್ ಅವರು ಯಾರೊಂದಿಗಾದರೂ ಭೇಟಿಯಾಗಲು, ಮಾತನಾಡಲು ಇಚ್ಛಿಸಿದರೆ ಅದು ಅಮೆರಿಕದ ಜನರ ಪರವಾಗಿ. ಜನರಿಗಾಗಿ ಅವರು ಸರಿಯಾದದ್ದನ್ನು ಮಾಡಲು ಪ್ರಯತ್ನಿಸಲು ಸಿದ್ಧರಿದ್ದಾರೆ ಎಂದು ಹೇಳಿದರು.
ನ್ಯೂಯಾರ್ಕ್ ನಗರದ ಮೇಯರ್ ಆಗಿ ಆಯ್ಕೆಯಾದ ಜೋಹ್ರಾನ್ ಮಮ್ದಾನಿ ಅವರನ್ನು ಶುಕ್ರವಾರ ಓವಲ್ ಕಚೇರಿಯಲ್ಲಿ ಭೇಟಿಯಾಗಲು ನಿರ್ಧರಿಸಲಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರವೇ ಘೋಷಣೆ ಮಾಡಿದ್ದರು. ಈ ಕುರಿತು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಾದ ಟ್ರೂತ್ ನಲ್ಲಿ ಪೋಸ್ಟ್ ಮಾಡಿರುವ ಅವರು, ನ್ಯೂಯಾರ್ಕ್ ನಗರದ ಕಮ್ಯುನಿಸ್ಟ್ ಮೇಯರ್ ಜೋಹ್ರಾನ್ ಮಮ್ದಾನಿ ಅವರು ನನ್ನೊಂದಿಗೆ ಸಭೆ ನಡೆಸಲು ಅವಕಾಶ ಕೋರಿದ್ದಾರೆ. ನವೆಂಬರ್ 21ರಂದು ಶುಕ್ರವಾರ ಓವಲ್ ಕಚೇರಿಯಲ್ಲಿ ಈ ಸಭೆ ನಡೆಸಲು ನಾವು ಒಪ್ಪಿಕೊಂಡಿದ್ದೇವೆ ಎಂದು ಅವರು ತಿಳಿಸಿದ್ದಾರೆ.
