ಉದಯವಾಹಿನಿ, ಕಠ್ಮಂಡು : ಕೆಲವು ತಿಂಗಳ ಹಿಂದೆ ನೇಪಾಳದಲ್ಲಿ ಹೊಸ ಕ್ರಾಂತಿ ಉಂಟು ಮಾಡಿದ್ದ ಜೆನ್ ಝಿ ತಲೆಮಾರು ಮತ್ತೊಂದು ಹೋರಾಟ ನಡೆಸುತ್ತಿದೆ. ಪದಚ್ಯುತ ಪ್ರಧಾನಿ ಕೆ.ಪಿ. ಶರ್ಮಾ ಒಲಿ ನೇತೃತ್ವದ ಕಮ್ಯುನಿಸ್ಟ್ ಪಾರ್ಟಿ ಆಫ್ ನೇಪಾಳ-ಯುನಿಫೈಡ್ ಮಾರ್ಕ್ಸಿಸ್ಟ್ ಲೆನಿನಿಸ್ಟ್ ಕಾರ್ಯಕರ್ತರು ಮತ್ತು ಜೆನ್ ಝಿ ಪ್ರತಿಭಟನಾಕಾರರ ನಡುವೆ ಘರ್ಷಣೆ ಭುಗಿಲೆದ್ದಿದ್ದು, ಬಾರಾ ಜಿಲ್ಲೆಯಲ್ಲಿ ಮತ್ತೆ ಕರ್ಫ್ಯೂ ಹೇರಲಾಗಿದೆ. ಹೆಚ್ಚುತ್ತಿರುವ ಉದ್ವಿಗ್ನತೆಯನ್ನು ಶಮನಗೊಳಿಸಲು ಕರ್ಫ್ಯೂ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾಡಳಿತ ಕಚೇರಿ ಪ್ರಕಟಿಸಿದೆ.ಇತ್ತೀಚಿನ ದಿನಗಳಲ್ಲಿ ನೇಪಾಳ ರಾಜಕೀಯ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿರುವ ಯುವ ಪ್ರತಿಭಟನಾಕಾರರ ಗುಂಪು ಮತ್ತು ಯುಎಂಎಲ್ ಬೆಂಬಲಿಗರೊಂದಿಗೆ ಕೆಲವು ದಿನಗಳ ಹಿಂದೆ ಆರಂಭವಾದ ಘರ್ಷಣೆ ತಾರಕಕ್ಕೇರಿದೆ.
ಮತ್ತಷ್ಟು ಹಿಂಸಾಚಾರವನ್ನು ತಡೆಗಟ್ಟಲು ಬಾರಾ ಜಿಲ್ಲೆಯ ಪ್ರಮುಖ ಜಂಕ್ಷನ್‌ಗಳಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಲಾಗಿದೆ. ಜಿಲ್ಲೆಯಲ್ಲಿನ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ. “ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಘರ್ಷಣೆಯ ನಂತರ ಕರ್ಫ್ಯೂ ಅನ್ನು ಮತ್ತೆ ವಿಧಿಸಲಾಗಿದೆ” ಎಂದು ಸಹಾಯಕ ಮುಖ್ಯ ಜಿಲ್ಲಾ ಅಧಿಕಾರಿ ಛಬಿರಾಮನ್ ಸುಬೇದಿ ಹೇಳಿದ್ದಾರೆ.
