ಉದಯವಾಹಿನಿ, ನವದೆಹಲಿ: ಭಾರತ ಟೆಸ್ಟ್ ತಂಡದಲ್ಲಿ ಭವಿಷ್ಯದ ದೃಷ್ಟಿಕೋನದಲ್ಲಿ ಮೂರನೇ ಕ್ರಮಾಂಕಕ್ಕೆ ಸಾಯಿ ಸುದರ್ಶನ್ (Sai Sudarshan) ಅಥವಾ ವಾಷಿಂಗ್ಟನ್ ಸುಂದರ್ ಅವರಲ್ಲಿ ಒಬ್ಬರನ್ನು ಪರಿಗಣಿಸಬೇಕೆಂದು ಗೌತಮ್ ಗಂಭೀರ್ ಮಾರ್ಗದರ್ಶನದ ಟೀಮ್ ಮ್ಯಾನೇಜ್‌ಮೆಂಟ್‌ಗೆ ಮಾಜಿ ಬ್ಯಾಟ್ಸ್‌ಮನ್ ಅಜಿಂಕ್ಯ ರಹಾನೆ ಆಗ್ರಹಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಸಾಯಿ ಸುದರ್ಶನ್‌ಗೆ ಅವಕಾಶ ನೀಡಲಾಗಿರಲಿಲ್ಲ. ಆ ಮೂಲಕ ಮೂರನೇ ಕ್ರಮಾಂಕದಲ್ಲಿ ವಾಷಿಂಗ್ಟನ್ ಸುಂದರ್‌ಗೆ ಅವಕಾಶ ನೀಡಲಾಗಿತ್ತು. ಈ ಪಂದ್ಯದ ಎರಡೂ ಇನಿಂಗ್ಸ್‌ಗಳಲ್ಲಿ ವಾಷಿಂಗ್ಟನ್ ಸುಂದರ್ ಗಮನ ಸೆಳೆದರೂ ಭಾರತ ತಂಡ 30 ರನ್‌ಗಳಿಂದ ಸೋಲು ಅನುಭವಿಸಿತ್ತು.
ಗೌತಮ್ ಗಂಭೀರ್ ಭಾರತ ತಂಡದ ಹೆಡ್ ಕೋಚ್ ಆದ ಬಳಿಕಬ ಟೆಸ್ಟ್ ತಂಡದ ಪ್ಲೇಯಿಂಗ್ XIನಲ್ಲಿನ ಮೂರನೇ ಕ್ರಮಾಂಕದಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗುತ್ತಿದೆ. ಸಾಯಿ ಸುದರ್ಶನ್, ಕರುಣ್ ನಾಯರ್ ಹಾಗೂ ಶುಭಮನ್ ಗಿಲ್ ಅವರನ್ನು ಪ್ರಯತ್ನಿಸಲಾಗಿತ್ತು. ಇದೀಗ ವಾಷಿಂಗ್ಟನ್ ಸುಂದರ್ ಅವರನ್ನು ಆಡಿಸಲಾಗಿದೆ. ಆದರೂ ಇನ್ನೂ ಯಾವುದೇ ಆಟಗಾರ ಮೂರನೇ ಕ್ರಮಾಂಕವನ್ನು ಭದ್ರಪಡಿಸಿಕೊಂಡಿಲ್ಲ. ಆದರೆ, ವಾಷಿಂಗ್ಟನ್ ಸುಂದರ್ ಕೋಲ್ಕತಾ ಟೆಸ್ಟ್‌ನ ಎರಡೂ ಇನಿಂಗ್ಸ್‌ಗಳಲ್ಲಿ 30ಕ್ಕೂ ಅಧಿಕ ರನ್ ನೀಡಿ ಎಲ್ಲರ ಭರವಸೆ ಮೂಡಿಸಿದ್ದಾರೆ.
ಆರ್ ಅಶ್ವಿನ್ ಅವರ ಯುಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಅಜಿಂಕ್ಯ ರಹಾನೆ, “ನಾನು ಸಾಯಿ ಸುದರ್ಶನ್ ಅವರ ಹೆಸರನ್ನು ತೆಗೆದುಕೊಳ್ಳುತ್ತೇನೆ. ಅವರು 87 ಮತ್ತು 39 ರನ್ ಗಳಿಸುವ ಮೂಲಕ ಉತ್ತಮ ಪ್ರದರ್ಶನವನ್ನು ತೋರಿದ್ದಾರೆ. 6 ಅಥವಾ 7ನೇ ಕ್ರಮಾಂಕಗಳಿಗೆ ಹೋಲಿಕೆ ಮಾಡಿದರೆ, ನಿಮಗೆ ಮೂರನೇ ಕ್ರಮಾಂಕಕ್ಕೆ ಸಂಪೂರ್ಣ ವಿಭಿನ್ನ ಕೌಶಲ ಇರುವ ಬ್ಯಾಟ್ಸ್‌ಮನ್ ನಿಮಗೆ ಅಗತ್ಯವಿದೆ. ವಾಷಿಂಗ್ಟನ್ ಸುಂದರ್ ಅದ್ಭುತ ಪ್ರತಿಭೆ, ಆದರೆ ಮೂರನೇ ಕ್ರಮಾಂಕ ಅವರನ್ನು ಗಲಿಬಿಲಿಗೊಳಿಸುತ್ತದೆ. ತಾನು ಹೇಗೆ ಆಟಕ್ಕೆ ಹೊಂದಿಕೊಳ್ಳಬೇಕೆಂದು ವಾಷಿಂಗ್ಟನ್ ಯೋಚಿಸುತ್ತಿರಬೇಕು, ಆದರೆ ಅವರು ಆಲ್‌ರೌಂಡರ್ ಎಂದು ನಾನು ಭಾವಿಸುತ್ತೇನೆ,” ಎಂದು ಹೇಳಿದ್ದಾರೆ.
