ಉದಯವಾಹಿನಿ, ಮಂಗಳೂರು: ಬಹುನಿರೀಕ್ಷಿತ ಮಾಸ್ ಮತ್ತು ಆಕ್ಷನ್ ಪೋಸ್ಟರ್ಸ್, ಟೀಸರ್, ಟ್ರೈಲರ್ ಹಾಗೂ ರೈ ರೈ ರೈ ಅದ್ಭುತ ಹಾಡಿನ ಮೂಲಕ ಪ್ರೇಕ್ಷಕರಲ್ಲಿ ಇನ್ನಷ್ಟೂ ಕುತೂಹಲ ಮೂಡಿಸಿರುವ ಆಪರೇಷನ್ ಲಂಡನ್ ಕೆಫೆ ಕನ್ನಡ ಚಿತ್ರವು ಇದೇ ನವೆಂಬ‌ರ್ 28ರಂದು ಏಕಕಾಲಕ್ಕೆ ಕನ್ನಡ ಮರಾಠಿ ಮತ್ತು ಹಿಂದಿ ಭಾಷೆಯಲ್ಲಿ ತೆರೆ ಕಾಣಲಿದೆ ಎಂದು ನಟ ಅರ್ಜುನ್ ಕಾಪಿಕಾಡ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ನಿರ್ಮಾಪಕ ವಿಜಯ್ ಕುಮಾರ್ ಶೆಟ್ಟಿ ಚಿತ್ರಕ್ಕೆ ಸಾಕಷ್ಟು ಬಂಡವಾಳ ಹಾಕಿ ಸಿನಿಮಾ ಮಾಡಿದ್ದಾರೆ. ಮರಾಠಿ ಭಾಷೆ ಬಾರದೆ ಇದ್ರೂ ಯಾವುದೇ ಸಮಸ್ಯೆಯಾಗದಂತೆ ನಟಿಸಲು ಸಹಕಾರ ನೀಡಿದ್ದಾರೆ. ತುಳುವರು ನನ್ನನ್ನು ಬೆಳೆಸಿದ್ದಾರೆ. ಅದೇ ಪ್ರೀತಿ ಈ ಕನ್ನಡ ಸಿನಿಮಾಕ್ಕೂ ಇರಲಿ ಎಂದರು.
ನಟ ಕವೀಶ್ ಶೆಟ್ಟಿ ಮಾತನಾಡಿ, ಚಿತ್ರದ ಪ್ರಚಾರ ಕಾರ್ಯದಲ್ಲಿ ಈಗಾಗಲೇ ಚಿತ್ರತಂತ ತೊಡಗಿಸಿಕೊಂಡಿದ್ದು, ಕರ್ನಾಟಕ ಮತ್ತು ಮಹಾರಾಷ್ಟ್ರದೆಲ್ಲೆಡೆ ವಿವಿಧ ಪ್ರಚಾರ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಕನ್ನಡ ಮತ್ತು ಮರಾಠಿ ಎರಡೂ ಭಾಷೆಯಲ್ಲಿ ಏಕಕಾಲಕ್ಕೆ ಚಿತ್ರೀಕರಣಗೊಂಡಿರುವ ಈ ಚಿತ್ರವನ್ನು ವಿಜಯ್ ಕುಮಾರ್ ಶೆಟ್ಟಿ ಅವರಾಲ್, ರಮೇಶ್ ಕೊಠಾರಿ, ದೀಪಕ್ ರಾಣೆ ಮತ್ತು ವಿಜಯ ಪ್ರಕಾಶ್ ಇಂಡಿಯನ್ ಫಿಲಂ ಫ್ಯಾಕ್ಟರಿ ಮತ್ತು ದೀಪಕ್ ರಾಣೆ ಫಿಲಂಸ್ ಲಾಂಛನದ ಅಡಿಯಲ್ಲಿ ಬಹಳ ಅದ್ದೂರಿಯಾಗಿ ನಿರ್ಮಿಸಿದ್ದಾರೆ. ಸಡಗರ ರಾಘವೇಂದ್ರ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಜಿಲ್ಕಾ ಸಿನಿಮಾದಲ್ಲಿ ಅಭಿನಯಿಸಿದ್ದ ನಾನು ಈ ಸಿನಿಮಾದಲ್ಲಿ ವಿಭಿನ್ನ ಸಾಹಸಗಳ ಮೂಲಕ ಪ್ರೇಕ್ಷಕರ ಮನಮುಟ್ಟುವ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದರು.

Leave a Reply

Your email address will not be published. Required fields are marked *

error: Content is protected !!