ಉದಯವಾಹಿನಿ, ಚಿಕ್ಕಮಗಳೂರು: ಕಳಸ ತಾಲ್ಲೂಕಿನ ಸಂಸೆ ಗ್ರಾಮದ ಈಚಲಹೊಳೆಯಲ್ಲಿ ಗಿರಿಜನರಿಗೆ ದಿಕ್ಕು ತೋಚದ ಸನ್ನಿವೇಶ ಸೃಷ್ಟಿಯಾಗಿತ್ತು. ಅಲ್ಲಿನ ವೃದ್ಧೆ ಶೇಷಮ್ಮ ಬುಧವಾರ ತೀವ್ರ ಅಸ್ವಸ್ಥರಾಗಿದ್ದರು. ಸಂಪರ್ಕ ರಸ್ತೆ ಇಲ್ಲದ ಈ ಊರಿಂದ ಶೇಷಮ್ಮ ಅವರನ್ನು ಚಿಕಿತ್ಸೆಗೆ ಕಳಸಕ್ಕೆ ಕರೆದೊಯ್ಯುವ ಸವಾಲು ಎದುರಾಗಿತ್ತು. ಅರೆಕಾಲ ಯೋಚಿಸಿದ ಗಿರಿಜನರು ಹಿಂದೆ ಮುಂದೆ ನೋಡದೆ ಜೋಳಿಗೆ ಕಟ್ಟಿ ಶೇಷಮ್ಮ ಅವರನ್ನು ಹೊತ್ತುಕೊಂಡು ಬಂದು ಕಳಕೋಡು ತಲುಪಿಸಿದರು. ಅಲ್ಲಿಂದ ಆಟೊರಿಕ್ಷಾ ಮೂಲಕ ಅವರನ್ನು ಕಳಸದ ಆಸ್ಪತ್ರೆಗೆ ಸೇರಿಸಿದರು. 10 ಗಿರಿಜನ ಕುಟುಂಬಗಳು ವಾಸವಾಗಿರುವ ಸಂಸೆ ಪಂಚಾಯಿತಿ ವ್ಯಾಪ್ತಿಯ ಈಚಲಹೊಳೆ ಕಳಕೋಡಿನಿಂದ 3 ಕಿ.ಮೀ ದೂರದಲ್ಲಿ ಇರುವ ಪ್ರದೇಶ. ಇಲ್ಲಿನ ಗಿರಿಜನರು ಕೃಷಿಯಿಂದ ಅಷ್ಟಿಷ್ಟು ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ.
ರಸ್ತೆ ಸಂಪರ್ಕ ಇಲ್ಲದ ಈ ಊರಿನವರು ಅನಾರೋಗ್ಯದ ಸ್ಥಿತಿಯ ರೋಗಿಗಳನ್ನು ಜೋಳಿಗೆಯಲ್ಲೇ ಹೊರಬೇಕಾದ ಅನಿವಾರ್ಯತೆ ಇದೆ. ರೋಗಿಗಳನ್ನು ಹೊತ್ತುಕೊಂಡು ಕಳಕೋಡುವರೆಗೆ ತರುವಾಗ ರೋಗಿಗಳ ಆರೋಗ್ಯ ಇನ್ನಷ್ಟು ಹದಗೆಡುತ್ತದೆ. ಕಳಕೋಡಿನಿಂದ ಈಚಲಹೊಳೆಗೆ ಸಂಪರ್ಕ ರಸ್ತೆ ಬೇಕು ಎಂಬ ಬೇಡಿಕೆಗೆ ದಶಕಗಳು ಕಳೆದಿವೆ. ಆದರೆ ಕುದುರೆಮುಖ ರಾಷ್ಟ್ರೀಯ ಉದ್ಯಾನದ ನಡುವೆ ಈ ರಸ್ತೆಯ ಅರ್ಧ ಕಿ.ಮೀ. ಹಾದು ಹೋಗಬೇಕಿದೆ. ಇದಕ್ಕೆ ಅರಣ್ಯ ಇಲಾಖೆಯ ಆಕ್ಷೇಪ ಇದೆ ಎಂಬುದು ಸ್ಥಳೀಯರ ದೂರು. ‘ಕುದುರೆಮುಖ ರಾಷ್ಟ್ರೀಯ ಉದ್ಯಾನದ ಕಾರಣಕ್ಕೆ ನಮಗೆ ಎಲ್ಲದಕ್ಕೂ ಅರಣ್ಯ ಇಲಾಖೆ ಕಿರಿಕಿರಿ ಇದೆ. ಯಾವ ಮೂಲ ಸೌಕರ್ಯವೂ ಸಿಕ್ಕಿಲ್ಲ. ಜನಪ್ರತಿನಿಧಿಗಳಿಗೆ ಮನವಿ ಕೊಟ್ಟಿದ್ದರೂ ಪ್ರಯೋಜನ ಆಗಿಲ್ಲ’ ಎಂದು ಗಿರಿಜನ ಕಾಲೊನಿಯ ರಮೇಶ್ ಬೇಸರದಿಂದ ಹೇಳುತ್ತಾರೆ. ಈ ಬಗ್ಗೆ ಸಂಸೆ ಪಂಚಾಯಿತಿ ಅಧ್ಯಕ್ಷ ರವಿ ಕುಮಾರ್ ಅವರನ್ನು ಪ್ರಶ್ನಿಸಿದಾಗ ಅವರು, ‘ಕಳೆದ ವರ್ಷವೂ ಇಂತಹುದೇ ಘಟನೆ ನಡೆದ ನಂತರ ಪಂಚಾಯಿತಿಯು ರಸ್ತೆ ನಿರ್ಮಾಣಕ್ಕೆ ಮುಂದಾಗಿತ್ತು. ಆದರೆ, ಅರಣ್ಯ ಇಲಾಖೆಯು ಈ ಗ್ರಾಮದಲ್ಲಿ ಕಂದಾಯ ಭೂಮಿ ಇಲ್ಲ ಎಂಬ ಕಾರಣಕ್ಕೆ ಕಾಮಗಾರಿ ನಡೆಸಲು ಅವಕಾಶ ಕೊಡಲಿಲ್ಲ.ಅರಣ್ಯ ಇಲಾಖೆ ಒಪ್ಪಿಗೆ ಕೊಟ್ಟರೆ ತಕ್ಷಣ ಕಾಲೊನಿಗೆ ರಸ್ತೆ ಮಾಡಲು ಪಂಚಾಯಿತಿ ಸಿದ್ಧವಿದೆ’ ಎಂದು ಸ್ಪಷ್ಟಪಡಿಸಿದರು.
