ಉದಯವಾಹಿನಿ, ಬೆಂಗಳೂರು: ಈವರೆಗೂ ಸಿಸಿಟಿವಿಗಳಲ್ಲಿ ಕೇವಲ ದೃಶ್ಯಗಳು ಮಾತ್ರ ಸೆರೆಯಾಗುತ್ತಿದ್ದವು. ಇನ್ಮುಂದೆ ವಿಡಿಯೋ ಜೊತೆ ಆಡಿಯೋ ಸಹ ರೆಕಾರ್ಡ್ ಆಗುವ ಕ್ರಮಕೈಗೊಳ್ಳಲಾಗುತ್ತಿದೆ. ಠಾಣೆಯ ಸಿಸಿಟಿವಿಗಳಲ್ಲಿ ಆಡಿಯೋ ರೆಕಾರ್ಡಿಂಗ್ ತಂತ್ರಜ್ಞಾನ ಅಳವಡಿಕೆ ಚಿಂತನೆ ಮಾಡಲಾಗುತ್ತಿದೆ. ಆ ಮೂಲಕ ಬೆಂಗಳೂರು ಪೊಲೀಸರ ಜನಸ್ನೇಹಿಯತ್ತ ಮತ್ತೊಂದು ಹೆಜ್ಜೆ ಇಡುತ್ತಿದ್ದಾರೆ. ಈಗಾಗಲೇ ಅಳವಡಿಸಿರುವ ಸಿಸಿಟಿವಿಗಳಿಗೆ ಆಡಿಯೋ ಬರುವ ಹಾಗೆ ಕ್ರಮಕ್ಕೆ ಚಿಂತನೆ ನಡೆದಿದ್ದು, ಪೊಲೀಸರ ಕಾರ್ಯವೈಖರಿಯಲ್ಲಿ ಸುಧಾರಣೆ ತರಲು ಪೊಲೀಸ್ ಕಮಿಷನರ್ ದಯಾನಂದ ಮುಂದಾಗಿದ್ದಾರೆ. ನಗರದ ಎಲ್ಲಾ ಕಾನೂನು ಸುವ್ಯವಸ್ಥೆ ಮತ್ತು ಸಂಚಾರಿ ಠಾಣೆಗಳಲ್ಲಿ ಈ ನೂತನ ಕ್ರಮ ಸಾಧ್ಯತೆ ಎನ್ನಲಾಗುತ್ತಿದೆ. ಠಾಣೆಗೆ ಬರುವ ದೂರುದಾರರ ದೂರು ಸ್ವೀಕಾರಕ್ಕೆ ಪೊಲೀಸರಿಂದ ವಿಳಂಬ, ಕೆಲ ಸಂದರ್ಭದಲ್ಲಿ ಅಧಿಕಾರ ದುರ್ಬಳಕೆ ಆರೋಪ ಸಹ ಕೇಳಿ ಬರುತ್ತಿದೆ. ಹಾಗಾಗಿ ತ್ವರಿತ ಗತಿಯಲ್ಲಿ ನ್ಯಾಯಕಲ್ಪಿಸುವ ಹಾಗೂ ದಕ್ಷತೆ ತೊರದವರ ಮೇಲೆ ನಿಗಾ ವಹಿಸಲು ಸಿಸಿಟಿವಿಯಲ್ಲಿ ಸುಧಾರಣೆಯ ಚಿಂತನೆ ಮಾಡಲಾಗುತ್ತಿದೆ. ದೂರು ನೀಡಲು ಬಂದವರ ಜೊತೆ ಸಂಯಮದ ವರ್ತನೆ, ಸಿವಿಲ್ ವ್ಯಾಜ್ಯಗಳಲ್ಲಿ ಪೊಲೀಸರ ಮೂಗು ತೂರಿಸುವ ಕೆಲಸಕ್ಕೆ ಬ್ರೇಕ್ ಬೀಳಲಿದೆ. ಜೊತೆಗೆ ಪೊಲೀಸ್ ಅಧಿಕಾರಿ ಸಿಬ್ಬಂದಿಗಳ ಮೇಲೆ ಕಣ್ಣಿಡಲು ನಿರ್ಧರಿಸಲಾಗುತ್ತಿದೆ.
