ಉದಯವಾಹಿನಿ, ಪಶ್ಚಿಮ ಬಂಗಾಳ: ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆಯು ಪಶ್ಚಿಮ ಬಂಗಾಳದ ಗೋಬೊರಾಂಡಾ ಗ್ರಾಮದ ಕುಟುಂಬವೊಂದಕ್ಕೆ 37 ವರ್ಷಗಳ ಹಿಂದೆ ಕಳೆದು ಹೋಗಿದ್ಧ ಮಗನನ್ನು ಹುಡುಕಿಕೊಟ್ಟಿದೆ. ಪುರುಲಿಯಾದಲ್ಲಿ ಮತದಾರರ ಪಟ್ಟಿಯ ತೀವ್ರ ಪರಿಷ್ಕರಣೆ ಸಂದರ್ಭದಲ್ಲಿ ಸುಮಾರು ನಾಲ್ಕು ದಶಕಗಳ ಹಿಂದೆ ಕಳೆದು ಹೋಗಿದ್ದ ವಿವೇಕ್ ಚಕ್ರವರ್ತಿ ಅವರನ್ನು ಮರಳಿ ಕುಟುಂಬದೊಂದಿಗೆ ಸೇರಿಸಿದೆ. ಇದು ಅವರ ಮನೆಯಲ್ಲಿ ಏಕಕಾಲದಲ್ಲಿ ದುಃಖ ಮತ್ತು ಸಂತೋಷ ತುಂಬುವಂತೆ ಮಾಡಿತ್ತು.
ಪಶ್ಚಿಮ ಬಂಗಾಳದಾದ್ಯಂತ ರಾಜಕೀಯ ಚರ್ಚೆಗೆ ಕಾರಣವಾಗಿರುವ ಮತದಾರರ ಪಟ್ಟಿಗಳ ವಿಶೇಷ ತೀವ್ರ ಪರಿಷ್ಕರಣೆ ಪುರುಲಿಯಾದಲ್ಲಿನ ಹಳ್ಳಿಯೊಂದರಲ್ಲಿ ಅಪರೂಪದ ಘಟನೆಗೆ ಸಾಕ್ಷಿಯಾಗಿದೆ. ಇದು ಸುಮಾರು ನಾಲ್ಕು ದಶಕಗಳಿಂದ ದೂರವಾಗಿದ್ದ ಮಗನನ್ನು ತನ್ನ ಕುಟುಂಬದೊಂದಿಗೆ ಸೇರಿಸಿದೆ. 1988ರಲ್ಲಿ ವಿವೇಕ್ ಚಕ್ರವರ್ತಿ ಎಂಬವರು ಮನೆ ಬಿಟ್ಟು ಹೋಗಿದ್ದು, ಸಾಕಷ್ಟು ಹುಡುಕಾಟ ನಡೆಸಿದರೂ ಪ್ರಯೋಜನವಾಗಿರಲಿಲ್ಲ. ಅವರ ಕುಟುಂಬ ಅವರನ್ನು ಮತ್ತೆ ಕಾಣುವ ಭರವಸೆಯನ್ನೇ ಕಳೆದುಕೊಂಡಿತ್ತು. ಅನೇಕ ವರ್ಷಗಳ ಕಾಲ ಅವರನ್ನು ಹುಡುಕಾಟ ನಡೆಸಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಆದರೆ ಇದೀಗ ಮತದಾರರ ವಿಶೇಷ ಪರಿಷ್ಕರಣೆಯು ಕುಟುಂಬಕ್ಕೆ ಕಳೆದು ಹೋದ ಮಗನನ್ನು ಹುಡುಕಿಕೊಟ್ಟಿದೆ.ವಿವೇಕ್ ಚಕ್ರವರ್ತಿ ಅವರ ಕಿರಿಯ ಸಹೋದರ ಪ್ರದೀಪ್ ಚಕ್ರವರ್ತಿ ಅವರು ಬೂತ್ ಮಟ್ಟದ ಅಧಿಕಾರಿ ಆಗಿದ್ದಾರೆ. ವಿಶೇಷ ಮತದಾರರತೀವ್ರ ಪರಿಷ್ಕರಣೆ ವೇಳೆ ಅವರು ತಮ್ಮ ಪ್ರದೇಶದಲ್ಲಿ ವಿತರಿಸಲಾದ ಪ್ರತಿಯೊಂದು ಗಣತಿ ನಮೂನೆಯ ಹೆಸರು ಮತ್ತು ಫೋನ್ ಸಂಖ್ಯೆಯನ್ನು ಪರಿಶೀಲಿಸುತ್ತಿದ್ದಾಗ ತಮ್ಮ ಸಹೋದರನನ್ನು ಪತ್ತೆ ಹಚ್ಚಿದ್ದಾರೆ.
