ಉದಯವಾಹಿನಿ, ಮಹಾರಾಷ್ಟ್ರ: ಕಾಡು ಮೃಗಗಳು ದಾಳಿ ಮಾಡಿದರೆ ಎಷ್ಟು ಭಯಾನಕವಾಗಿರುತ್ತದೆ ಎಂಬುದು ನಿಮಗೆಲ್ಲ ತಿಳಿದೆ ಇದೆ. ಪ್ರತಿವರ್ಷ ದೇಶದಲ್ಲಿ ಸಾಕಷ್ಟು ಎಷ್ಟೋ ಜನರು ಸಿಂಹ, ಹುಲಿ ಚಿರತೆಯ ದಾಳಿಗೆ ಪ್ರಾಣ ಕಳೆದು ಕೊಂಡ ವರು ಇದ್ದಾರೆ. ಅರಣ್ಯ ಸಮೀಪದ ಪ್ರದೇಶದಲ್ಲಿಯೇ ಮನೆ, ಹೊಲ ಇದ್ದವರಿಗೆ ನಿತ್ಯ ಹುಲಿ, ಚಿರತೆ ಸೇರಿ ಕಾಡು ಪ್ರಾಣಿಗಳ ಭಯ ಹೆಚ್ಚಾಗಿಯೇ ಇರುತ್ತದೆ. ಕಾಡು ಪ್ರಾಣಿಗಳು ಜನರಿಗೆ ತೊಂದರೆ ನೀಡದಿರಲು ಅರಣ್ಯ ಇಲಾಖೆ ವಿವಿಧ ಕ್ರಮ ಕೈಗೊಂಡರು ಕೂಡ ಕೆಲವೊಮ್ಮೆ ಕಾಡು ಬಿಟ್ಟು ನಾಡಿಗೆ ಬಂದು ಮನುಷ್ಯರನ್ನು ತಿಂದು ಬಿಡುತ್ತವೆ. ಇದೀಗ ಮಹಾರಾಷ್ಟ್ರದಲ್ಲಿ ಚಿರತೆ ನಿರಂತರ ದಾಳಿಯಿಂದಾಗಿ ಅಲ್ಲಿನ ಜನರು ಹೈರಾಣಾಗಿದ್ದಾರೆ. ಇದಕ್ಕಾಗಿ ಭಯಾನಕ ಚಿರತೆಗಳಿಂದ ರಕ್ಷಿಸಿಕೊಳ್ಳುವ ಸಲುವಾಗಿ ಹೊಸ ಮಾಸ್ಟರ್ ಪ್ಲ್ಯಾನ್ ಮಾಡಿದ್ದಾರೆ. ಮಹಾರಾಷ್ಟ್ರದ ಪುಣೆಯ ಶಿರೂರಿನಲ್ಲಿರುವ ಪಿಂಪರ್‌ಖೇಡ್ ಗ್ರಾಮಸ್ಥರು ತಮ್ಮನ್ನು ರಕ್ಷಿಸಿಕೊಳ್ಳುವ ಸಲುವಾಗಿ ಮೊಳೆಗಳಿಂದ ಕೂಡಿದ ಕೊರಳಪಟ್ಟಿಗಳನ್ನು ಧರಿಸುತ್ತಿದ್ದಾರೆ. ಚಿರತೆ ಸಾಮಾನ್ಯವಾಗಿ ಕೊರಳ ಮೇಲೆ ದಾಳಿ ಮಾಡುತ್ತದೆ. ಇದನ್ನು ತಡೆಯುವ ಸಲುವಾಗಿ ಈ ಐಡಿಯಾ ಮಾಡಲಾಗಿದೆ. ಸದ್ಯ ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿದೆ.
ಪುಣೆಯ ಪಿಂಪರ್‌ಖೇಡ್ ಗ್ರಾಮದಲ್ಲಿ ಇತ್ತೀಚಿನ ಕೆಲ ವರ್ಷಗಳಿಂದ ಚಿರತೆ ದಾಳಿ ಮಾಡುವ ಪ್ರಮಾಣ ಹೆಚ್ಚಾಗಿದೆ. ಹಾಡ ಹಗಲಲ್ಲೂ ಹೊಲ, ಗದ್ದೆ, ಮನೆಗಳಿಗೆ ನುಗ್ಗುವ ಚಿರತೆಗಳು ಸಾಕುಪ್ರಾಣಿಯ ಜತೆಗೆ ಜನರನ್ನು ಕೊಲ್ಲುತ್ತಿವೆ. ಹೀಗಾಗಿ ಇಲ್ಲಿನ ನಿವಾಸಿಗಳು ಹೊಲಗಳಲ್ಲಿ ಕೆಲಸ ಮಾಡುವಾಗ ತಮ್ಮ ಪ್ರಾಣ ರಕ್ಷಣೆಗಾಗಿ ‘ಮೊನಚಾದ ಕಬ್ಬಿಣದ ಮೊಳೆಗಳುಳ್ಳ ಕಾಲರ್’ಗಳನ್ನು ಧರಿಸಲು ಮುಂದಾಗಿದ್ದಾರೆ. ಚಿರತೆ ದಾಳಿಗೆ ಮುನ್ನೆಚ್ಚರಿಕೆ ಕ್ರಮವಾಗಿ ಅನೇಕ ಕಡೆ ಗ್ರಾಮಸ್ಥರು ಕಬ್ಬಿಣದ ಗ್ರಿಲ್ ಬೇಲಿಯನ್ನು ಸಹ ಅಳವಡಿಸಿದ್ದಾರೆ. ಗ್ರಾಮಸ್ಥರ ಈ ಹೊಸ ರಕ್ಷಣಾ ಕ್ರಮಗಳು ಸೋಶಿಯಲ್ ಮಿಡಿಯಾದಲ್ಲಿ ಸುದ್ದಿಯಾಗುತ್ತಿದೆ.
