ಉದಯವಾಹಿನಿ, ನವದೆಹಲಿ: ಭಾರತದ 53ನೇ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾ.ಸೂರ್ಯಕಾಂತ್ ಅವರು ಸೋಮವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಹಿಂದಿನ ಸಿಜೆಐ ಬಿಆರ್ ಗವಾಯ್ ಅವರು ಭಾನುವಾರ ನಿವೃತ್ತರಾಗಿದ್ದಾರೆ.
ಅವರ ಸ್ಥಾನಕ್ಕೆ 63 ವರ್ಷದ ನ್ಯಾ.ಸೂರ್ಯ ಕಾಂತ್ ಅವರು ಆಯ್ಕೆಯಾಗಿದ್ದಾರೆ. ರಾಷ್ಟ್ರಪತಿ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ನೂತನ ಸಿಜೆಐಗೆ ಪ್ರಮಾಣ ವಚನ ಬೋಧಿಸಿದರು. ಸಮಾರಂಭದಲ್ಲಿ ಉಪರಾಷ್ಟ್ರಪತಿ ಸಿಪಿ ರಾಧಾಕೃಷ್ಣನ್, ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ ಸೇರಿದಂತೆ ಹಿರಿಯ ನಾಯಕರು ಭಾಗವಹಿಸಿದ್ದರು.
ಸೂರ್ಯಕಾಂತ್ ಅವರು 2019ರ ಮೇ 24ರಂದು ಸುಪ್ರೀಂಕೋರ್ಟ್‌ನ ನ್ಯಾಯಮೂರ್ತಿಯಾಗಿ ನೇಮಕವಾಗಿದ್ದರು. ಹಿಂದಿಯಲ್ಲಿ ಪ್ರಮಾಣ ವಚನ ಸ್ವೀಕರಿಸಿದ ನ್ಯಾಯಮೂರ್ತಿ ಸೂರ್ಯಕಾಂತ್ ಅವರನ್ನು ಕಳೆದ ಅಕ್ಟೋಬರ್ 30ರಂದು ಮುಂದಿನ ಸಿಜೆಐ ಆಗಿ ನೇಮಿಸಲಾಗಿತ್ತು. ಇವರು ಸುಮಾರು 15 ತಿಂಗಳುಗಳ ಕಾಲ ಈ ಹುದ್ದೆಯಲ್ಲಿ ಇರಲಿದ್ದಾರೆ. ಫೆಬ್ರವರಿ 9, 2027ರಂದು ಸೂರ್ಯಕಾಂತ್ ಅವರಿಗೆ 65 ವರ್ಷ ವಯಸ್ಸು ತುಂಬಿದ ಬಳಿಕ ಅಧಿಕಾರದಿಂದ ನಿವೃತ್ತರಾಗಲಿದ್ದಾರೆ.
