ಉದಯವಾಹಿನಿ, ನವದೆಹಲಿ: ದಕ್ಷಿಣ ಆಫ್ರಿಕಾ ವಿರುದ್ಧ ಮೂರು ಪಂದ್ಯಗಳ ಏಕದಿನ ಸರಣಿಯ ಭಾರತ ತಂಡದಲ್ಲಿ ವಿಕೆಟ್‌ ಕೀಪರ್‌-ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್‌ಗೆ ಅವಕಾಶ ನೀಡದ ಬಗ್ಗೆ ಸ್ಪಿನ್‌ ದಿಗ್ಗಜ ಅನಿಲ್‌ ಕುಂಬ್ಳೆ ಬೇಸರ ವ್ಯಕ್ತಪಡಿಸಿದ್ದಾರೆ. ಭಾರತ ಏಕದಿನ ತಂಡದಲ್ಲಿ ಸ್ಥಾನ ಪಡೆಯಲು ಸಂಜು ಅರ್ಹರು ಎಂದು ಅಭಿಪ್ರಾಯ ಪಟ್ಟಿದ್ದಾರೆ. ನವೆಂಬರ್ 30 ರಂದು ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಕಾದಾಟ ನಡೆಸಲಿವೆ. ಭಾರತ ಏಕದಿನ ತಂಡದಲ್ಲಿ ಸಂಜು ಸ್ಯಾಮ್ಸನ್‌ ಬದಲು ವಿಕೆಟ್‌ ಕೀಪರ್‌ ಆಗಿ ರಿಷಭ್‌ ಪಂತ್‌ ಹಾಗೂ ಎರಡನೇ ವಿಕೆಟ್‌ ಕೀಪರ್‌ ಆಗಿ ಧ್ರುವ್‌ ಜುರೆಲ್‌ ಅವರನ್ನು ಆರಿಸಲಾಗಿದೆ.ಅಜಿತ್‌ ಅಗರ್ಕರ್‌ ಸಾರಥ್ಯದ ಬಿಸಿಸಿಐ ಆಯ್ಕೆ ಸಮಿತಿಯು ಸಂಜು ಸ್ಯಾಮ್ಸನ್‌ ಅವರನ್ನು ಕೇವಲ ಟಿ20ಐ ತಂಡದಲ್ಲಿ ಮಾತ್ರ ಆಡಿಸುತ್ತಿದೆ. ಆದರೆ, ಸಂಜು ತಮ್ಮ ಕೊನೆಯ ಒಡಿಐ ಸರಣಿಯಲ್ಲಿ ಶತಕವನ್ನು ಕೂಡ ಬಾರಿಸಿದ್ದರು. ಇದರ ಹೊರತಾಗಿಯೂ ಅವರನ್ನು ಸತತವಾಗಿ 50 ಓವರ್‌ಗಳ ಸ್ವರೂಪದಿಂದ ಕಡೆಗಣಿಸಲಾಗುತ್ತಿದೆ. ಇವರ ಬದಲು ರಿಷಭ್‌ ಪಂತ್‌ಗೆ ಮಣೆ ಹಾಕಲಾಗಿದೆ. ಪಂತ್‌ 2024ರಲ್ಲಿ ಕೊಲಂಬೊದಲ್ಲಿ ಶ್ರೀಲಂಕಾ ವಿರುದ್ಧ ಕೊನೆಯ ಏಕದಿನ ಪಂದ್ಯವನ್ನು ಆಡಿದ್ದರು. ಇದೀಗ ಅವರು 50 ಓವರ್‌ಗಳ ಸ್ವರೂಪಕ್ಕೆ ಮರಳಿದ್ದಾರೆ.

“ಭಾರತ ಏಕದಿನ ತಂಡದಲ್ಲಿ ನಾನು ನೋಡ ಬಯಸುವ ಆಟಗಾರರ ಪೈಕಿ ಸಂಜು ಸ್ಯಾಮ್ಸನ್‌ ಕೂಡ ಒಬ್ಬರು. ಅವರು ಕಳೆದ ಎರಡು ವರ್ಷಗಳ ಹಿಂದೆ ಅವರು ಏಕದಿನ ತಂಡದಲ್ಲಿ ಆಡಿದ್ದರು ಹಾಗೂ ಶತಕವನ್ನು ಬಾರಿಸಿದ್ದರು. ಆದರೆ, ಆಸ್ಟ್ರೇಲಿಯಾ ಏಕದಿನ ಸರಣಿಯಲ್ಲಿ ಇವರು ಆಡಿಲ್ಲ ಎಂದು ನನಗೆ ಗೊತ್ತಿದೆ,” ಎಂದು ಅನಿಲ್‌ ಕುಂಬ್ಳೆ ಹೇಳಿದ್ದಾರೆ.ಸಂಜು ಸ್ಯಾಮ್ಸನ್‌ ಅವರು 2023ರ ಡಿಸೆಂಬರ್‌ನಲ್ಲಿ ಪರ್ಲ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕೊನೆಯ ಏಕದಿನ ಪಂದ್ಯವನ್ನು ಆಡಿದ್ದರು. ಈ ಪಂದ್ಯದಲ್ಲಿ ಅವರು 114 ಎಸೆತಗಳಲ್ಲಿ 108 ರನ್‌ಗಳನ್ನು ಗಳಿಸಿದ್ದರು. ಈ ಪಂದ್ಯದಲ್ಲಿ ಅವರು ಮೂರನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಿದ್ದರು. ಇಲ್ಲಿಯವರೆಗೂ ಅವರು ಆಡಿದ 16 ಏಕದಿನ ಪಂದ್ಯಗಳಿಂದ ಒಂದು ಶತಕ ಹಾಗೂ ಮೂರು ಅರ್ಧಶತಕಗಳನ್ನು ಬಾರಿಸಿದ್ದರು. ಇವರು ಮಧ್ಯಮ ಓವರ್‌ಗಳಲ್ಲಿ ಶಾಂತತೆ ಹಾಗೂ ತಾಳ್ಮೆಯನ್ನು ಆದರೂ ಅವರು ದೀರ್ಘಾವಧಿ ಒಡಿಐ ತಂಡದಲ್ಲಿ ಉಳಿಯಲು ಸಾಧ್ಯವಾಗಿಲ್ಲ.

Leave a Reply

Your email address will not be published. Required fields are marked *

error: Content is protected !!