ಉದಯವಾಹಿನಿ, ಲಕ್ನೋ: 2047ರಲ್ಲಿ ವಿಕಸಿತ ಭಾರತ ನಿರ್ಮಾಣ ಮಾಡಲು ರಾಮನ ಗುಣ ಮೈಗೂಡಿಸಿಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಅಯೋಧ್ಯೆ ರಾಮ ಮಂದಿರದಲ್ಲಿ ಧರ್ಮ ಧ್ವಜಾರೋಹಣ ನೆರವೇರಿಸಿದ ಬಳಿಕ ಮಾತನಾಡಿದ ಅವರು, ಇಂದು ಅಯೋಧ್ಯೆ ನಗರ ಹೊಸ ಇತಿಹಾಸಕ್ಕೆ ಸಾಕ್ಷಿಯಾಗಿದೆ. ಸಂಪೂರ್ಣ ಭಾರತ, ವಿಶ್ವ ರಾಮಮಯವಾಗಿದೆ. 500 ವರ್ಷಗಳ ಯಜ್ಞ ಇಂದು ಪೂರ್ಣಗೊಂಡಿದೆ. ರಾಮ ಭಕ್ತರ ಮನಸ್ಸಿನಲ್ಲಿ ಅಪಾರ ಆನಂದವಿದೆ. ವರ್ಷಗಳ ಪ್ರಾರ್ಥನೆ ಇಂದು ಸಿದ್ಧಿಯಾಗಿದೆ. ಇದು ಕೇವಲ ಧ್ವಜ ಅಲ್ಲ, ಭಾರತೀಯ ಸಭ್ಯತೆಯ ಪ್ರತೀಕ. ಈ ಧ್ವಜ ರಾಮರಾಜ್ಯವನ್ನು ಪ್ರತಿರೂಪಿಸುತ್ತದೆ. ಈ ಧ್ವಜ ಸಂತರ ಸಾಧನೆ, ಶ್ರೀರಾಮನ ಆದರ್ಶದ ಉದ್ಘೋಷವಾಗಿದೆ. ಧ್ವಜ ರಾಮ ಮಂದಿರದ ಕಿರೀಟ. ಗೆಲುವು ಸತ್ಯಕ್ಕೆ ಸಿಗಲಿದೆ ಎಂದರು.

ಈ ಧ್ವಜ ದೂರದಿಂದಲೇ ರಾಮ ಮಂದಿರದ ದರ್ಶನ ಮಾಡಿಸುತ್ತದೆ. ರಾಮ ಮಂದಿರಾ ನಿರ್ಮಾಣಕ್ಕೆ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ. ವಿಕಸಿತ ಭಾರತ ನಮ್ಮ ಸಂಕಲ್ಪವಾಗಿದೆ. ಒಂದೇ ಸ್ಥಳದಲ್ಲಿ ವಾಲ್ಮೀಕಿ, ಅಹಲ್ಯ ಸೇರಿ ಎಲ್ಲ ಪ್ರಮುಖರಿದ್ದಾರೆ. ರಾಮ ಮಂದಿರಕ್ಕೆ ಬರುವವರು ಆವರಣದಲ್ಲಿರುವ ಏಳು ಮಂದಿರಕ್ಕೆ ಭೇಟಿ ನೀಡಿ ಅವರ ಜೀವನದ ಮೌಲ್ಯಗಳನ್ನು ಮೈಗೂಡಿಸಿಕೊಳ್ಳಬೇಕು. ರಾಮನಿಂದ ರಾಷ್ಟ್ರ ನಿರ್ಮಾಣ ಮಾಡಬೇಕು ಎಂದು ಸಲಹೆ ನೀಡಿದರು.

ವರ್ತಮಾನದ ಬಗ್ಗೆ ಯೋಚಿಸುವವರು ಭವಿಷ್ಯದ ಪೀಳಿಗೆಗೆ ಅನ್ಯಾಯ ಮಾಡಿದಂತೆ. ನಾವು ಭವಿಷ್ಯದ ಪೀಳಿಗೆ ಬಗ್ಗೆ ಯೋಚಿಸಬೇಕು. ನಾವು ದೂರದೃಷ್ಟಿಯೊಂದಿಗೆ ಕೆಲಸ ಮಾಡಬೇಕು. ಅದಕ್ಕಾಗಿ ನಾವು ಶ್ರೀರಾಮನ ವ್ಯಕ್ತಿತ್ವದಿಂದ ಕಲಿಯಬೇಕು. ರಾಮ ಅಂದರೆ ಆದರ್ಶ, ರಾಮ ಅಂದರೆ ಪುರುಷೋತ್ತಮ. ರಾಮ ಅಂದರೆ ಧರ್ಮದ ದಾರಿಯಲ್ಲಿ ನಡೆಯುವವ, ಕ್ಷಮೆಯ ಗುಣ, ಜ್ಞಾನ ವಿವೇಕ, ಕೃತಜ್ಞತೆ, ಸೌಮ್ಯ ಸ್ವಭಾವದ ಧೃಡತೆ, ರಾಮ ಅಂದರೆ ಸತ್ಯದ ಬುನಾದಿ, ನಿಷ್ಕಲ್ಮಶ ಮನಸ್ಸು. ರಾಮ ಓರ್ವ ವ್ಯಕ್ತಿಯಲ್ಲ ಅವರೊಂದು ಮೌಲ್ಯ, ಅವರೊಂದು ದಿಕ್ಕು ಎಂದು ಅಭಿಪ್ರಾಯಪಟ್ಟರು.

Leave a Reply

Your email address will not be published. Required fields are marked *

error: Content is protected !!