ಉದಯವಾಹಿನಿ, ವಾಷಿಂಗ್ಟನ್: ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರ ಆಹ್ವಾನ ಸ್ವೀಕರಿಸಿದ್ದು, ಮುಂದಿನ ವರ್ಷ ಏಪ್ರಿಲ್ ವೇಳೆ ಚೀನಾಕ್ಕೆ ಭೇಟಿ ನೀಡುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ಕ್ಸಿಜಿನ್ಪಿಂಗ್ ಅವರಿಗೂ ಪ್ರತಿಯಾಗಿ ಟ್ರಂಪ್ ಮುಂದಿನ ವರ್ಷಾಂತ್ಯಕ್ಕೆ ಅಮೆರಿಕಕ್ಕೆ ಬರುವಂತೆ ಆಹ್ವಾನಿಸಿದ್ದಾಗಿ ತಿಳಿಸಿದ್ದಾರೆ. ದಕ್ಷಿಣ ಕೊರಿಯಾದಲ್ಲಿ ಇಬ್ಬರು ನಾಯಕರು ವೈಯಕ್ತಿಕವಾಗಿ ಭೇಟಿ ಮಾಡಿ ತಿಂಗಳ ಬಳಿಕ ಕ್ಸಿ ಅವರೊಂದಿಗೆ ಫೋನ್‌ನಲ್ಲಿ ಟ್ರಂಪ್ ಮಾತನಾಡಿದ್ದಾರೆ. ಉಕ್ರೇನ್, ಫೆಂಟನಿಲ್ ಮತ್ತು ಅಮೆರಿಕದ ಸೋಯಾಬೀನ್ ಖರೀದಿ ಸೇರಿದಂತೆ ಹಲವು ವಿಷಯಗಳ ಬಗ್ಗೆ ಚರ್ಚಿಸಿದ್ದೇವೆ ಎಂದು ಕೂಡ ಅವರು ತಿಳಿಸಿದ್ದು, ಚೀನಾದೊಂದಿಗೆ ನಮ್ಮ ಸಂಬಂದ ಸಾಕಷ್ಟು ಗಟ್ಟಿಯಾಗುತ್ತಿದೆ ಎಂದು ಟ್ರೂಥ್ ಸಾಮಾಜಿಕ ಜಾಲತಾಣದಲ್ಲಿ ಡೊನಾಲ್ಡ್ ಟ್ರಂಪ್ ಪೋಸ್ಟ್ ಮಾಡಿದ್ದಾರೆ.
ಉಭಯ ನಾಯಕರ ನಡುವಿನ ಕರೆ ವಿಚಾರವಾಗಿ ಮೊದಲು ಪ್ರತಿಕ್ರಿಯಿಸಿದ ಬೀಜಿಂಗ್, ಭೇಟಿ ವಿಚಾರವನ್ನು ಬಹಿರಂಗ ಪಡಿಸಲಿಲ್ಲ.
ಮಾತುಕತೆಯಲ್ಲಿ ಇಬ್ಬರು ನಾಯಕರು ವ್ಯಾಪಾರ, ತೈವಾನ್ ಮತ್ತು ಉಕ್ರೇನ್ ಬಗ್ಗೆ ಚರ್ಚಿಸಿದ್ದಾಗಿ ತಿಳಿಸಿದರು. ಚೀನಾದ ಮುಖ್ಯ ಭೂಭಾಗಕ್ಕೆ ತೈವಾನ್ ಮರಳುತ್ತಿದ್ದು, ಯುದ್ಧಾನಂತರದ ಅಂತಾರಾಷ್ಟ್ರೀಯ ಕ್ರಮದ ಅವಿಭಾಜ್ಯ ಅಂಗವಾಗಿದೆ ಎಂದು ಟ್ರಂಪ್‌ಗೆ ಕ್ಸಿ ಜಿನ್‌ಪಿಂಗ್ ತಿಳಿಸಿದರು. ಟ್ರಂಪ್ ಈ ಕುರಿತು ಸಾಮಾಜಿಕ ಜಾಲತಾಣದ ಪೋಸ್ಟ್ನಲ್ಲಿ ಉಲ್ಲೇಖಿಸಿಲ್ಲ. ಆದರೆ, ಇದು ಬೀಜಿಂಗ್‌ಗೆ ನಿರ್ಣಾಯಕ ವಿಷಯವಾಗಿದೆ ಎಂದು ಚೀನಾದ ವಿದೇಶಾಂಗ ಸಚಿವಾಲಯ ತಿಳಿಸಿದೆ.
