ಉದಯವಾಹಿನಿ, ಗುರುಮಠಕಲ್: ಮುಂಗಾರು ಆರಂಭವಾಗುತ್ತಿದ್ದಂತೆ ತಾಲ್ಲೂಕಿನ ಧಬ್ ದಬಿ ಜಲಪಾತದಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿತ್ತು. ಆದರೆ, ಪ್ರಸಕ್ತ ಸಾಲಿನ ಮುಂಗಾರು ಮಳೆಯ ಅಭಾವದಿಂದ ಜಲಪಾತ ಸೊರಗಿದ್ದು, ಪ್ರವಾಸಿಗರ ಸಂಖ್ಯೆಯೂ ಇಳಿಮುಖವಾಗಿದೆ. ಸುತ್ತಲೂ ಗುಡ್ಡ, ಹಸಿರ ಹೊದಿಕೆಯಂತೆ ಬೆಳೆದ ಕುರುಚಲು ಗಿಡಗಳ ಮದ್ಯೆ ಮೇಲಿಂದ ಧೋ ಎಂದು ರಭಸದಿಂದ ಧುಮ್ಮಿಕ್ಕುವ ಜಲಪಾತವನ್ನು ನೋಡಿ ಸಂತಸಗೊಳ್ಳುತ್ತಿದ್ದ ಪ್ರವಾಸಿಗರಿಂದ ದಬ್ ಧಬಿ ಜಲಪಾತ ಕಂಗೊಳಿಸುತ್ತಿತ್ತು. ಆದರೆ, ಈಗ ಜಲಪಾತದಲ್ಲಿ ಧುಮ್ಮಿಕ್ಕುವ ನೀರಿನ ಹರಿವು ಕಡಿಮೆಯಿದ್ದು, ಬಂದ ಪ್ರವಾಸಿಗರು ನಿರಾಸೆಯಿಂದ ಹಿಂದಿರುಗುವಂತಾಗಿದೆ. ಮುಂಗಾರು ಮಳೆ ಕೊರತೆ: ಜೂನ್ ತಿಂಗಳಲ್ಲಿ ತಾಲ್ಲೂಕು ವ್ಯಾಪ್ತಿಯ ಗುರುಮಠಕಲ್ 107 ಮಿ.ಮೀ., ಕೊಂಕಲ್ 106 ಮಿ.ಮೀ., ಬಳಿಚಕ್ರ 101 ಮಿ.ಮೀ. ವಾಡಿಕೆಯ ಮೊದಲ ಮಳೆ (ಮೃಗಶಿರ ಮಳೆ)ಯಾಗಬೇಕಿತ್ತು. ಆದರೆ, ಗುರುಮಠಕಲ್ 78 ಮಿ.ಮೀ. ಸುರಿದು ಶೇ.35 ರಷ್ಟು ಕೊರತೆ, ಕೊಂಕಲ್ 78 ಮಿ.ಮೀ. ಸುರಿದು ಶೇ.26 ಕೊರತೆ, ಬಳಿಚಕ್ರ 89 ಮಿ.ಮೀ. ಸುರಿದು ಶೇ.12 ರಷ್ಟು ಮಳೆಯ ಕೊರತೆಯಾಗಿದೆ. ಕಳೆದ ವಾರದಿಂದ ಗುರುಮಠಕಲ್ 31 ಮಿ.ಮೀ, ಕೊಂಕಲ್ 31 ಮಿ.ಮೀ, ಬಳಿಚಕ್ರ 34 ಮಿ.ಮೀ ವಾಡಿಕೆ ಮಳೆಯಾಗುವಲ್ಲಿ, ಸರತಿಯಂತೆ 41 ಮಿ.ಮೀ, 14 ಮಿ.ಮೀ, 8 ಮಿ.ಮೀ, ಮಳೆಯಾಗಿದ್ದು ಒಟ್ಟಾರೆ ಕಳೆದ ವಾರದಲ್ಲಿ ಶೇ. 25 ರಷ್ಟು ಮಳೆ ಕೊರತೆಯಾಗಿದೆ ಎಂದು ಕೆಎಸ್‌ಎನ್‌ಡಿಎಂಸಿ ಮಾಹಿತಿ ನೀಡಿದೆ.
ತ್ಯಾಜ್ಯ ಗುಡ್ಡೆಗಳು: ಜಲಪಾತದ ಆವರಣದಲ್ಲಿ, ಸುತ್ತಲೂ ಮತ್ತು ನಜರಾಪುರ ರಸ್ತೆಯ ಅರಣ್ಯ ಪ್ರದೇಶದಲ್ಲಿ ತ್ಯಾಜ್ಯವನ್ನು ಎಸೆಯುತ್ತಿರುವುದರಿಂದ ಸುತ್ತಲಿನ ವಾತಾವರಣವು ತಿಪ್ಪೆಗುಂಡಿಯಾಗುತ್ತಿದೆ ಎಂದು ಸೇಡಂ ತಾಲ್ಲೂಕಿನಿಂದ ಬಂದಿದ್ದ ಪ್ರವಾಸಿಗರಾದ ನರೇಶ, ಸುನೀಲ ಕಿಡಿಕಾರಿದರು. ಮದ್ಯದ ಬಾಟಲಿ, ಟೆಟ್ರಾ ಪ್ಯಾಕ್, ಪ್ಲಾಸ್ಟಿಕ್ ಲೋಟ, ಪ್ಲಾಸ್ಟಿಕ್ ತಾಟು, ಸಿಗರೇಟ್ ಪ್ಯಾಕೆಟ್ ಹೀಗೆ ತ್ಯಾಜ್ಯವನ್ನು ಚೀಲಗಳಲ್ಲಿ ತುಂಬಿಕೊಂಡು ಬಂದು ಎಲ್ಲೆಂದರಲ್ಲಿ ಎಸೆಯುವುದು ಸಾಮಾನ್ಯವಾಗಿದೆ.
ಸಮನ್ವಯ ಕೊರತೆ: ಜಲಪಾತವನ್ನು ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿ ಪಡಿಸುವ ಮಾತುಗಳು ಕೇಳಿಬರುತ್ತಲೇ ಇರುತ್ತವೆ. ಆದರೆ, ಈವರೆಗೂ ಅಂತಹ ಯಾವೊಂದು ಕೆಲಸವೂ ನಡೆದಿಲ್ಲ ಎನ್ನುವುದು ಸ್ಥಳೀಯರ ಆರೋಪ. ಅರಣ್ಯ, ಪ್ರವಾಸೋದ್ಯಮ, ಕಂದಾಯ, ಸಾರಿಗೆ, ಪಂಚಾಯತ್ ರಾಜ್ ಇಲಾಖೆಗಳ ನಡುವೆ ಸಮನ್ವಯತೆಯ ಕೊರತೆಯಿ ಇದ್ದರಿಂದ ಅಭಿವೃದ್ಧಿಗೆ ಗ್ರಹಣ ಹಿಡಿದಿದೆ ಎಂದು ಸಾಮಾಜಿಕ ಕಾರ್ಯಕರ್ತರು ತಿಳಿಸಿದರು.
