ಉದಯವಾಹಿನಿ, ಮುಂಬೈ: ರಸ್ತೆಯಲ್ಲಿ ವಾಹನ ಚಲಾಯಿಸುವಾಗ ಎಷ್ಟು ಜಾಗೃತಿ ವಹಿಸಿದರು ಅದು ಕಡಿಮೆ. ವಾಹನ ಚಾಲಕರು ರಸ್ತೆ ನಿಯಮ ಉಲ್ಲಂಘಿಸಿದಂತೆ ಅನೇಕ ಅಪಘಾತ ನಡೆಯುವ ಪ್ರಮಾಣ ಗಣನೀಯವಾಗಿ ಹೆಚ್ಚಾಗುತ್ತಿದೆ. ಅಂತೆಯೇ ಮಹಿಳೆಯೊಬ್ಬರು ತಮ್ಮ ಮೊಮ್ಮಗನ ಜೊತೆ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವೇಳೆ ಹಿಂದಿನಿಂದ ಬಂದ ಕಾರು ಏಕಾಏಕಿ ಢಿಕ್ಕಿ ಹೊಡೆದ ಘಟನೆ ಮಹಾರಾಷ್ಟ್ರದ ನಾಸಿಕ್ ನಲ್ಲಿ ನಡೆದಿದೆ. ಆ ಮಹಿಳೆ ಶಿವಸೇನೆಯ ಮಾಜಿ ಶಾಸಕಿ ನಿರ್ಮಲಾ ಗವಿತ್ ಎಂದು ತಿಳಿದುಬಂದಿದೆ.
ಕಾರು ಢಿಕ್ಕಿ ಹೊಡೆದ ರಭಸಕ್ಕೆ ಶಿವ ಸೇನೆಯ ಮಾಜಿ ಶಾಸಕಿ ನಿರ್ಮಲಾ ಗವಿತ್ ತೀವ್ರವಾಗಿ ಗಾಯಗೊಂಡಿದ್ದಾರೆ. ಸದ್ಯ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು ಚಿಕಿತ್ಸೆ ಪಡೆಯುತ್ತಿದ್ದಾರೆ. ಅಪಘಾತ ನಡೆದ ಸ್ಥಳದಲ್ಲಿ ಅಕ್ಕಪಕ್ಕದ ಮನೆಯ ಸಿಸಿಟಿವಿಯಲ್ಲಿ ಈ ದೃಶ್ಯಗಳು ಸೆರೆಯಾಗಿವೆ. ಸದ್ಯ ನಾಸಿಕ್ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಿಸಲಾಗಿದೆ. ಸದ್ಯ ನೆಟ್ಟಿಗರು ಚಾಲಕನ ಅಜಾಗರೂಕತೆ ಬಗ್ಗೆ ಆಕ್ರೋಶ ಹೊರಹಾಕಿದ್ದಾರೆ. ಶಿವಸೇನೆಯ ಮಾಜಿ ಶಾಸಕಿ ನಿರ್ಮಲಾ ಗವಿತ್ ಅವರು ತಮ್ಮ ಮೊಮ್ಮಗನೊಂದಿಗೆ ಮನೆಯ ಬಳಿ ಸಂಜೆ ವಾಕಿಂಗ್ ಹೋಗುತ್ತಿದ್ದರು. ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗಲೇ ಕಾರ್ ಒಂದು ಹಿಂದಿನಿಂದ ಬಂದು ಗವಿತ್ ಅವರ ಮೇಲೆ ಹರಿದಿದೆ. ಆ ಕಾರು ಸ್ವಲ್ಪ ದೂರಕ್ಕೆ ಅವರನ್ನು ಹೊತ್ತೊಯ್ದಿದೆ ಬಳಿಕ ರಸ್ತೆಬದಿಯಲ್ಲಿ ಅವರು ಪ್ರಜ್ಞೆ ತಪ್ಪಿ ಬಿದ್ದಿದ್ದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಶಾಸಕಿ ನಿರ್ಮಲಾ ಗವಿತ್ ಅವರನ್ನು ತತ್ ಕ್ಷಣವೇ ಹತ್ತಿರದ ಖಾಸಗಿ ಆಸ್ಪತ್ರೆಯ ಐಸಿಯುನಲ್ಲಿ ದಾಖಲಿಸಲಾಗಿದೆ. ಅವರೊಂದಿಗೆ ನಡೆದುಕೊಂಡು ಹೋಗುತ್ತಿದ್ದ ಅವರ ಮೊಮ್ಮಗ ಹಾಗೂ ಇನ್ನೊಂದು ಹುಡುಗಿಗೆ ಯಾವುದೇ ಗಾಯಗಳಾಗಿಲ್ಲ. ಗವಿತ್ ಅವರಿಗೆ ತೀವ್ರವಾಗಿ ಗಾಯವಾಗಿದ್ದು ಜೀವನ್ಮರಣ ಹೋರಾಟ ನಡೆಸುತ್ತಿದ್ದಾರೆ. ಪೊಲೀಸರು ಘಟನ ಸ್ಥಳದ ಸಿಸಿಟಿವಿ ಆಧಾರದ ಮೇಲೆ ಅವರ ಕುಟುಂಬಸ್ಥರ ದೂರಿನ ಅನ್ವಯ ಪ್ರಕರಣ ದಾಖಲಿಸಿದ್ದಾರೆ.
