ಉದಯವಾಹಿನಿ, ದುಬೈ : ಭಾರತದಲ್ಲಿ ಕಾರ್ಯಾಚರಿಸುತ್ತಿರುವ ಬೃಹತ್ ಕೊಕೇನ್ ಮಾದಕದ್ರವ್ಯ ಕಳ್ಳಸಾಗಣೆಜಾಲದ ಸೂತ್ರಧಾರಿ ಎನ್ನಲಾದ ಪವನ್ ಠಾಕೂ‌ರ್ ಶೀಘ್ರದಲ್ಲೇ ದುಬೈನಿಂದ ಭಾರತಕ್ಕೆ ಗಡಿಪಾರುಗೊಳ್ಳಲಿದ್ದಾನೆ ಎಂದು ವರದಿಯೊಂದು ತಿಳಿಸಿದೆ. ನವೆಂಬರ್‌ನಲ್ಲಿ ದಿಲ್ಲಿಯಲ್ಲಿ ವಶಪಡಿಸಿಕೊಳ್ಳಲಾದ 2500 ಕೋಟಿ ರೂ. ಮೌಲ್ಯದ 82 ಕಿಲೋಗ್ರಾಂ ಕೊಕೇನ್‌ ಕಳ್ಳಸಾಗಣೆಯ ಸೂತ್ರಧಾರಿಯೆಂದು ಆರೋಪಿಸಲಾಗಿದೆ.
ಪವನ್ ಠಾಕೂರ್‌ನ ಬಂಧನಕ್ಕಾಗಿ ಭಾರತೀಯ ಮಾದಕದ್ರವ್ಯ ನಿಯಂತ್ರಣ ದಳ ಕಳೆದ ವರ್ಷದ ಸೆಪ್ಟೆಂಬರ್‌ನಲ್ಲಿ ಇಂಟರ್‌ಪೋಲ್ ಮೂಲಕ ಆತನ ವಿರುದ್ಧ ಸಿಲ್ವರ್ ನೋಟಿಸ್ ಜಾರಿಗೊಳಿಸಿತ್ತು. ಈ ನೋಟಿಸ್‌ ಜಾರಿಯಿಂದಾಗಿ, ಆತನ ಆಸ್ತಿಪಾಸ್ತಿಗಳನ್ನು,ವಹಿವಾಟುಗಳನ್ನು ಹಾಗೂ ಹಣಕಾಸಿನ ಕಾರ್ಯನಿರ್ವಹಣೆಗಳನ್ನು ಪತ್ತೆಹಚ್ಚಲು ಎನ್‌ಸಿಬಿಗೆ ಸಾಧ್ಯವಾಗಲಿದೆ. ಜಾರಿ ನಿರ್ದೇಶನಾಲಯವು ಪವನ್‌ಠಾಕೂರ್ ಮಾಲಕತ್ವದ ಸ್ಥಳಗಳ ಮೇಲೆ ದಾಳಿ ನಡೆಸಿದ್ದಲ್ಲದೆ, ಆತನ 118 ಬೇನಾಮಿ ಖಾತೆಗಳನ್ನು ಮುಟ್ಟುಗೋಲು ಹಾಕಿತ್ತು.
ದಿಲ್ಲಿಯಲ್ಲಿ ಎನ್‌ಸಿಬಿ, ದಿಲ್ಲಿ ಪೊಲೀಸರು ಜಂಟಿಯಾಗಿ ನಡೆಸಿದ ಕಾರ್ಯಾಚರಣೆಯಲ್ಲಿ ವಶಪಡಿಸಿಕೊಂಡಿದ್ದ 282 ಕೋಟಿ ರೂ. ಮೌಲ್ಯದ ಮೆಥಾಂಫೆಟಾಮೈನ್ ಮಾದಕದ್ರವ್ಯ ಕಳ್ಳಸಾಗಣೆಯಲ್ಲೂ ಈತನ ಕೈವಾಡವಿದೆಯೆಂದು ಪೊಲೀಸರು ಪತ್ತೆಹಚ್ಚಿದ್ದಾರೆ. ಠಾಕೂರ್ ದೀರ್ಘಸಮಯದಿಂದ ಹವಾಲಾ ಹಾಗೂ ಕಪ್ಪುಹಣ ಬಿಳುಪು ದಂಧೆಯಲ್ಲೂ ತೊಡಗಿದ್ದನೆಂದು ಮೂಲಗಳು ತಿಳಿಸಿವೆ.

Leave a Reply

Your email address will not be published. Required fields are marked *

error: Content is protected !!