ಉದಯವಾಹಿನಿ, ಅಬುಧಾಬಿ, ಯುಎಇ: ನಾಗರಿಕ ವಿಮಾನಯಾನ ಪ್ರಾಧಿಕಾರವು ಯುನೈಟೆಡ್ ಅರಬ್ ಎಮಿರೇಟ್ಸ್ ವಾಯುಪ್ರದೇಶವನ್ನು ತಾತ್ಕಾಲಿಕವಾಗಿ ಮತ್ತು ಸಂಪೂರ್ಣವಾಗಿ ಮುಚ್ಚುವುದಾಗಿ ಘೋಷಿಸಿದೆ ಎಂದು ಅಲ್ ಜಜೀರಾ ವರದಿ ಮಾಡಿದೆ.
ಅಲ್ ಜಜೀರಾ ಪ್ರಕಾರ, ವಿಮಾನಗಳು ಮತ್ತು ವಾಯು ಸಿಬ್ಬಂದಿಗಳ ಸುರಕ್ಷತೆ ಖಚಿತಪಡಿಸಿಕೊಳ್ಳುವ ಜೊತೆಗೆ ಯುಎಇ ಭೂಪ್ರದೇಶವನ್ನು ರಕ್ಷಿಸುವ ಗುರಿ ಇಟ್ಟುಕೊಂಡಿರುವ ಈ ಕ್ರಮವು ಅಸಾಧಾರಣ ಮುನ್ನೆಚ್ಚರಿಕೆ ಕ್ರಮ ಎಂದು ಅಲ್ಲಿನ ಸರ್ಕಾರಿ ಮಾಧ್ಯಮ ತಿಳಿಸಿದೆ.
ಇರಾನ್ ಉಡಾಯಿಸಿದ ಹೊಸ ಅಲೆಯ ಕ್ಷಿಪಣಿ ಮತ್ತು ಡ್ರೋನ್ ದಾಳಿಯನ್ನು ತಡೆಯಲಾಗುತ್ತಿದೆ ಎಂದು ಯುಎಇ ರಕ್ಷಣಾ ಸಚಿವಾಲಯ ತಿಳಿಸಿದೆ ಎಂದು ಅಲ್ ಜಜೀರಾ ವರದಿ ಮಾಡಿದೆ. ನಮ್ಮ ಬಳಿ ಇರುವ ವಾಯು ರಕ್ಷಣಾ ವ್ಯವಸ್ಥೆಗಳು, ಇರಾನ್‌ನಿಂದ ಉಡಾಯಿಸಲಾದ ಕ್ಷಿಪಣಿಗಳು ಮತ್ತು ಡ್ರೋನ್‌ಗಳನ್ನು ಯಶಸ್ವಿಯಾಗಿ ಆಕಾಶದಲ್ಲೇ ಪುಡಿಗಟ್ಟುತ್ತಿವೆ ಎಂದು ಯುಎಇ ರಕ್ಷಣಾ ಸಚಿವಾಲಯ ಹೇಳಿದೆ ಎಂದು ಅಲ್ ಜಜೀರಾ ವರದಿ ಮಾಡಿದೆ.

ನಗರದ ಕೆಲವು ಭಾಗಗಳಲ್ಲಿ ಕೇಳಿಬರುವ ಶಬ್ದಗಳು, ನಮ್ಮ ವಾಯು ರಕ್ಷಣಾ ವ್ಯವಸ್ಥೆಗಳು ನಡೆಸಿದ ಯಶಸ್ವಿ ಪ್ರತಿಬಂಧಕ ಕಾರ್ಯಾಚರಣೆಗಳಿಂದಾಗಿವೆ ಎಂದು ದುಬೈನ ಅಧಿಕಾರಿಗಳು ಹೇಳಿದ್ದಾರೆ ಎಂದು ದುಬೈ ಮಾಧ್ಯಮ ಕಚೇರಿಯ ಎಕ್ಸ್ ಪೋಸ್ಟ್ ತಿಳಿಸಿದೆ.ಡ್ರೋನ್ ದಾಳಿಯಿಂದ ಉಂಟಾದ ಹಾನಿಯನ್ನು ನಿರ್ಣಯಿಸುವವರೆಗೆ, ಬೃಹತ್ ಶಾ ಅನಿಲ ಕೇಂದ್ರದ ಕಾರ್ಯಾಚರಣೆಯನ್ನು ಅಬುಧಾಬಿ ಅಧಿಕಾರಿಗಳು ಸ್ಥಗಿತಗೊಳಿಸಿದ್ದಾರೆ ಎಂದು ಅಬುಧಾಬಿ ಮಾಧ್ಯಮ ಕಚೇರಿ ಮಂಗಳವಾರ ಸಾಮಾಜಿಕ ಮಾಧ್ಯಮಕ್ಕೆ ನೀಡಿದ ಪೋಸ್ಟ್‌ನಲ್ಲಿ ತಿಳಿಸಿದೆ ಎಂದು ಸಿಎನ್‌ಎನ್ ವರದಿ ಮಾಡಿದೆ.

ಸಿಎನ್‌ಎನ್ ವರದಿ ಪ್ರಕಾರ, ಅಬುಧಾಬಿ ನಗರದ ನೈಋತ್ಯಕ್ಕೆ ಸುಮಾರು 180 ಕಿಲೋಮೀಟರ್ ದೂರದಲ್ಲಿರುವ ಶಾ ಅನಿಲ ಘಟಕವು ವಿಶ್ವದ ಅತಿದೊಡ್ಡದಾದ ತೈಲ ಸಂಸ್ಕರಣಾ ಘಟಕವಾಗಿದೆ. ದಿನಕ್ಕೆ 1.28 ಬಿಲಿಯನ್ ಸ್ಟ್ಯಾಂಡರ್ಡ್ ಕ್ಯೂಬಿಕ್ ಅಡಿ ಅನಿಲವನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಈ ಘಟಕ ಹೊಂದಿದೆ ಎಂದು ಅದರ ನಿರ್ವಾಹಕ, ಸರ್ಕಾರಿ ಸ್ವಾಮ್ಯದ ಅಬುಧಾಬಿ ರಾಷ್ಟ್ರೀಯ ತೈಲ ಕಂಪನಿ (ADNOC) ತಿಳಿಸಿದೆ.

 

Leave a Reply

Your email address will not be published. Required fields are marked *

error: Content is protected !!