ಉದಯವಾಹಿನಿ, ತುಮಕೂರು: ಬಿತ್ತನೆ ಬೀಜ ಮತ್ತು ರಸಗೊಬ್ಬರದ ದರಪಟ್ಟಿಯ ವಿವರಗಳನ್ನು ಎಲ್ಲಾ ರೈತ ಸಂಪರ್ಕ ಕೇಂದ್ರ ಹಾಗೂ ರಸಗೊಬ್ಬರ ಮಳಿಗೆಗಳಲ್ಲಿ ರೈತರ ಮಾಹಿತಿಗಾಗಿ ಕಡ್ಡಾಯವಾಗಿ ಪ್ರದರ್ಶಿಸುವಂತೆ ಕೃಷಿ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಕೆ. ಶ್ರೀನಿವಾಸ್ ಸೂಚಿಸಿದರು. ಜಿಲ್ಲಾಧಿಕಾರಿಗಳ ಕಚೇರಿಯ ನ್ಯಾಯಾಲಯ ಸಭಾಂಗಣದಲ್ಲಿ ನಡೆದ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ(ವಿಮಾ) ಯೋಜನೆ ಮುಂಗಾರು-೨೦೨೩ರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಗ್ರಿಕಲ್ಚರ್ ಇನ್ಸೂರೆನ್ಸ್ ಲಿಮಿಟೆಡ್ ಸಂಸ್ಥೆಯು ಜಿಲ್ಲೆಯಲ್ಲಿ ವಿಮಾ ಯೋಜನೆಯನ್ನು ಅನುಷ್ಟಾನ ಮಾಡಲು ಆಯ್ಕೆಯಾಗಿದ್ದು, ಸದರಿ ಸಂಸ್ಥೆಯ ಪ್ರತಿನಿಧಿಗಳು ಎಲ್ಲಾ ಕೃಷಿ ಇಲಾಖೆಯ ಕಚೇರಿಯಲ್ಲಿ ಇನ್ನೆರಡು ದಿನಗಳೊಳಗೆ ವರದಿ ಮಾಡಿಕೊಂಡು ವಿಮೆ ಸಂಬಂಧಿಸಿದಂತೆ ಕರ್ತವ್ಯ ನಿರ್ವಹಿಸಬೇಕೆಂದು ಸೂಚಿಸಿದರು.
ಮುಂಗಾರು ಹಂಗಾಮಿನಲ್ಲಿ ಮಳೆ ಆದಾಗ ಅಥವಾ ಇತರೆ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಿಂದ ಅಧಿಸೂಚಿತ ಘಟಕದಲ್ಲಿ ಶೇ.೭೫ಕ್ಕಿಂತ ಹೆಚ್ಚಿನ ಕ್ಷೇತ್ರದಲ್ಲಿ ಬಿತ್ತನೆ ವಿಫಲಗೊಂಡಲ್ಲಿ ವಿಮಾ ಮೊತ್ತದ ಗರಿಷ್ಠ ಶೇ.೨೫ರಷ್ಟು ಬೆಳೆ ವಿಮೆ ನಷ್ಠ ಪರಿಹಾರವನ್ನು ವಿಮಾ ಸಂಸ್ಥೆಯ ವಿಮೆ ಮಾಡಿಸಿದ ರೈತರಿಗೆ ಇತ್ಯರ್ಥಪಡಿಸುವಂತೆ ಸೂಚಿಸಿದರು. ಜಿಲ್ಲೆಯಲ್ಲಿ ಜುಲೈ ೧೨ರವರೆಗೆ ೩೭,೮೪೧ ರೈತರು ಬೆಳೆ ವಿಮೆಗಾಗಿ ಆನ್‌ಲೈನ್ ಮೂಲಕ ನೋಂದಣಿ ಮಾಡಿದ್ದಾರೆ ಎಂದು ತಿಳಿಸಿದರಲ್ಲದೆ, ಆಯಾ ತಾಲ್ಲೂಕಿನ ಕೃಷಿ ಸಹಾಯಕ ನಿರ್ದೇಶಕರು ಬೆಳೆ ವಿಮೆಯ ಮಾಹಿತಿಯನ್ನು ಬಿತ್ತಿ ಪತ್ರಗಳ ಮೂಲಕ ರೈತರಿಗೆ ನೀಡಬೇಕು ಹಾಗೂ ವಿಮೆ ಸೌಲಭ್ಯದಿಂದಾಗುವ ಪ್ರಯೋಜನಗಳನ್ನು ತಿಳಿಸಬೇಕು ಎಂದು ಹೇಳಿದರು. ಸಭೆಯಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಕೆ.ಹೆಚ್.ರವಿ, ೧೦ ತಾಲ್ಲೂಕಿನ ಸಹಾಯಕ ನಿರ್ದೇಶಕರು ಹಾಗೂ ಅಗ್ರಿಕಲ್ಚರ್ ಇನ್ಸೂರೆನ್ಸ್ ಕಂಪನಿ ಲಿಮಿಟೆಡ್ ಸಂಸ್ಥೆಯ ಅಧಿಕಾರಿಗಳು ಉಪಸ್ಥಿತರಿದ್ದರು.
