ಉದಯವಾಹಿನಿ, ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ಕಳೆದ ಕೆಲವು ದಿನಗಳಿಂದ ಅಧಿಕಾರ ಹಂಚಿಕೆಯ ಬಗ್ಗೆ ಸುದ್ದಿಗಳು ಹರಿದಾಡುತ್ತಿದ್ದು, ಈ ನಡುವೆ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ದಿಡೀರ್ ಎಂದು ಮುಬಯಿಯಲ್ಲಿ ಕಾಣಿಸಿಕೊಂಡಿದ್ದಾರೆ. ಹೈಕಮಾಂಡ್ ಭೇಟಿಯಾಗಲು ದೆಹಲಿಗೆ ತೆರಳಲಿದ್ದಾರೆ ಎಂಬ ಸುದ್ದಿಗೆ ಅವರು ಸ್ಪಷ್ಟನೆ ನೀಡಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್, “ನನ್ನನ್ನು ಹೈಕಮಾಂಡ್ ಆಗಲಿ ಅಥವಾ ದೆಹಲಿಯ ಯಾವ ನಾಯಕರೇ ಆಗಲಿ ಅಲ್ಲಿಗೆ ಬರುವಂತೆ ಕರೆದಿಲ್ಲ. ಇದೆಲ್ಲವೂ ಕೇವಲ ಊಹಾಪೋಹ,” ಎಂದು ನೇರವಾಗಿ ಸ್ಪಷ್ಟಪಡಿಸಿದರು. ಈ ಮೂಲಕ ಶನಿವಾರ ಅವರು ದೆಹಲಿಗೆ ಹಾರಲಿದ್ದಾರೆ ಎಂಬ ಸುದ್ದಿಯನ್ನು ತಳ್ಳಿಹಾಕಿದರು.
ದೆಹಲಿ ಪ್ರವಾಸ ಇಲ್ಲ ಎಂದರೂ, ಡಿಕೆಶಿ ಗುರುವಾರ ಸಂಜೆ ಮಹಾರಾಷ್ಟ್ರದ ಮುಂಬೈಗೆ ಪ್ರಯಾಣ ಬೆಳೆಸಿದರು. ಇದೊಂದು ಖಾಸಗಿ ಕಾರ್ಯಕ್ರಮವಾಗಿದ್ದು, ಅದರಲ್ಲಿ ಭಾಗವಹಿಸಲು ಹೋಗುತ್ತಿದ್ದೇನೆ. ಸಂಜೆ ಹೋಗಿ ರಾತ್ರಿಯೇ ವಾಪಸ್ ಬೆಂಗಳೂರಿಗೆ ಮರಳಲಿದ್ದೇನೆ ಎಂದು ಮಾಹಿತಿ ನೀಡಿದರು. ಈ ದಿಢೀರ್ ಮುಂಬೈ ಭೇಟಿ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
