ಉದಯವಾಹಿನಿ, ಬೆಂಗಳೂರು : ಸಮಗ್ರ ಶಿಶು ಅಭಿವೃದ್ಧಿ ಯೋಜನೆ (ಐಸಿಡಿಎಸ್), ತಾಯಿ ಶಿಶು ಮರಣ ಹಾಗೂ ಅಪೌಷ್ಟಿಕತೆ ನಿವಾರಿಸುವ ದೂರದೃಷ್ಟಿಯ ಯೋಜನೆಯಾಗಿದ್ದು, 69,922 ಅಂಗನವಾಡಿ ಕೇಂದ್ರಗಳಿಂದ 40 ಲಕ್ಷಕ್ಕೂ ಹೆಚ್ಚು ಮಹಿಳೆಯರು ಮತ್ತು ಮಕ್ಕಳಿಗೆ ಅನುಕೂಲವಾಗಿದೆ. ಐಸಿಡಿಎಸ್ ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ಜಾರಿ ಮಾಡಿರುವ ರಾಜ್ಯಗಳಲ್ಲಿ ದೇಶದಲ್ಲಿಯೇ ಕರ್ನಾಟಕ ಮೊದಲನೇ ಸ್ಥಾನದಲ್ಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ವತಿಯಿಂದ ನಗರದ ಅರಮನೆ ಮೈದಾನದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಕರ್ನಾಟಕದಲ್ಲಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯ ಸುವರ್ಣ ಮಹೋತ್ಸವ ಹಾಗೂ ಮಕ್ಕಳ ದಿನಾಚರಣೆಯ ವಿಶ್ವ ಹಿರಿಯ ನಾಗರಿಕರ ದಿನಾಚರಣೆ ಹಾಗೂ ಪ್ರಶಸ್ತಿ ಪ್ರಧಾನ ಸಮಾರಂಭ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಹತ್ವಕಾಂಕ್ಷಿ ಯೋಜನೆಗಳನ್ನು ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಿಎಂ ಮಾತನಾಡಿದರು.ಕಾರ್ಯಕ್ರಮದಲ್ಲಿ ಸರ್ಕಾರದ ಮಹತ್ವಾಕಾಂಕ್ಷೆಯ ಅಕ್ಕಪಡೆ, ಗೃಹಲಕ್ಷ್ಮಿ ವಿವಿಧೋದ್ದೇಶ ಸಹಕಾರ ಸಂಘ ಹಾಗೂ 5000 ಅಂಗನವಾಡಿ ಕೇಂದ್ರಗಳಲ್ಲಿ ಎಲ್‌ಕೆಜಿ, ಯುಕೆಜಿ ತರಗತಿಗಳಿಗೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ಚಾಲನೆ ನೀಡಿದರು. ಇದೇ ವೇಳೆ 50ನೇ ವರ್ಷದ ಐಸಿಡಿಎಸ್ ಸಂಭ್ರಮಕ್ಕೆ ಬಿಡುಗಡೆ ಮಾಡಲಾಯಿತು.
2025ರ ಅಕ್ಟೋಬರ್ 2ಕ್ಕೆ ಐಸಿಡಿಎಸ್ ಕಾರ್ಯಕ್ರಮಕ್ಕೆ 50 ವರ್ಷಗಳು ತುಂಬಿರುವುದು ಮೈಲುಗಲ್ಲು ಸಾಧನೆಯಾಗಿದೆ. ಭಾರತದ ಪ್ರಧಾನಿಯಾಗಿದ್ದ ಶ್ರೀಮತಿ ಇಂದಿರಾ ಗಾಂಧಿಯವರು ಹಮ್ಮಿಕೊಂಡಿದ್ದ ದೂರದೃಷ್ಟಿಯ ಯೋಜನೆಯೇ ಐಸಿಡಿಎಸ್. ಎಪ್ಪತ್ತರ ದಶಕದಲ್ಲಿ ಮಹಿಳೆ ಮತ್ತು ಮಕ್ಕಳಲ್ಲಿ ಅಪೌಷ್ಠಿಕತೆ, ಶಿಶು ಮತ್ತು ತಾಯಿಮರಣ ಹೆಚ್ಚಿದ ಸಂದರ್ಭದಲ್ಲಿ ಈ ಕಾರ್ಯಕ್ರಮ ಜಾರಿಯಾಗಿತ್ತು. ಶ್ರೀಮತಿ ಇಂದಿರಾಗಾಂಧಿಯವರು, ತಾಯಿ ಮತ್ತು ಮಕ್ಕಳ ಮರಣ ತಡೆಗಟ್ಟಲು ಹಾಗೂ ಅವರಲ್ಲಿ ಅಪೌಷ್ಟಿಕತೆ ನಿವಾರಿಸುವ ಉದ್ದೇಶದಿಂದ ಜಾರಿ ಮಾಡಿದರು. ರಾಜ್ಯದಲ್ಲಿ 69,922 ಅಂಗನವಾಡಿ ಕೇಂದ್ರಗಳಿದ್ದು, ಸುಮಾರು 40 ಲಕ್ಷಕ್ಕೂ ಹೆಚ್ಚು ಮಹಿಳೆಯರು ಮತ್ತು ಮಕ್ಕಳು ಈ ಕೇಂದ್ರಗಳಿಂದ ಲಾಭ ಪಡೆಯುತ್ತಿದ್ದಾರೆ. ಟಿ.ನರಸೀಪುರ ತಾಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ಮೊದಲು ಪ್ರಾರಂಭಗೊಂಡ ಅಂಗನವಾಡಿ ಕೇಂದ್ರ, 33 ತಾಲೂಕುಗಳಲ್ಲಿ ಕಾರ್ಯನಿರ್ವಹಿಸಿತು. ಪ್ರಸ್ತುತ ರಾಜ್ಯಾದ್ಯಂತ 69,922 ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ ಎಂದರು.
