ಉದಯವಾಹಿನಿ, ನವದೆಹಲಿ: ಕೆನಡಾದ ಸರ್ರೆಯಲ್ಲಿರುವ ಹಾಸ್ಯನಟ ಕಪಿಲ್ ಶರ್ಮಾ ಅವರ ಕ್ಯಾಪ್ಸ್ ಕೆಫೆಯ ಹೊರಗೆ ಗುಂಡು ಹಾರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧು ಮಾನ್ ಸಿಂಗ್ ಸೆಖೋನ್ ಎಂಬಾತನನ್ನು ದೆಹಲಿ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಲಾರೆನ್ಸ್ ಬಿಷ್ಣೋಯ್ ಜಾಲದ ದರೋಡೆಕೋರ ಗೋಲ್ಡಿ ಬ್ರಾರ್ ಜೊತೆ ಈತ ಸಂಪರ್ಕ ಹೊಂದಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೆನಡಾದಲ್ಲಿ ನಡೆದ ಗುಂಡಿನ ದಾಳಿಯ ನಂತರ ಸೆಖೋನ್ ಭಾರತಕ್ಕೆ ನುಸುಳಿದ್ದ. ಕ್ರೈಂ ಬ್ರಾಂಚ್ ಅಧಿಕಾರಿಗಳು ಅವನನ್ನು ಸುಧಾರಿತ ಶಸ್ತ್ರಾಸ್ತ್ರಗಳೊಂದಿಗೆ ಬಂಧಿಸಿದ್ದಾರೆ ಎಂದು ತಿಳಿಸಿದ್ದಾರೆ. ಅವನ ಚಲನವಲನಗಳು, ಸಂಪರ್ಕ ಜಾಲ ಮತ್ತು ದಾಳಿಯ ಹಿಂದಿನ ಶಸ್ತ್ರಾಸ್ತ್ರ ಸರಬರಾಜು ಪೂರೈಕೆಯನ್ನು ಪತ್ತೆ ಹಚ್ಚಲು ಕೇಂದ್ರ ಸಂಸ್ಥೆಗಳು ತನಿಖೆಗೆ ಸೇರಿವೆ.
ಅಧಿಕಾರಿಗಳ ಪ್ರಕಾರ, ಈ ವರ್ಷ ಕ್ಯಾಪ್ಸ್ ಕೆಫೆಯನ್ನು ಹಲವು ಬಾರಿ ಗುರಿಯಾಗಿಸಿಕೊಂಡ ಶೂಟರ್‌ಗಳಿಗೆ ಸೆಖೋನ್, ಶಸ್ತ್ರಾಸ್ತ್ರಗಳು ಮತ್ತು ಲಾಜಿಸ್ಟಿಕ್ಸ್ ವ್ಯವಸ್ಥೆ ಮಾಡಿದ್ದಾನೆ. ಈ ವರ್ಷದ ಜುಲೈನಲ್ಲಿ ಬ್ರಿಟಿಷ್ ಕೊಲಂಬಿಯಾದಲ್ಲಿ ಹಾಸ್ಯನಟ ತೆರೆದಿದ್ದ ಈ ಔಟ್‌ಲೆಟ್ ಮೇಲೆ ಮೂರು ಬಾರಿ ದಾಳಿ ಮಾಡಲಾಗಿದೆ. ಘಟನೆಯಲ್ಲಿ ಯಾವುದೇ ಗಾಯಗಳು ವರದಿಯಾಗಿಲ್ಲ. ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊವೊಂದರಲ್ಲಿ ದರೋಡೆಕೋರ ಗೋಲ್ಡಿ ಧಿಲ್ಲನ್ ದಾಳಿಯ ಜವಾಬ್ದಾರಿಯನ್ನು ವಹಿಸಿಕೊಂಡಿದ್ದಾನೆ. ಪೊಲೀಸ್ ಹೇಳಿರುವಂತೆ, ಸೆಖೋನ್ ವಿದೇಶದಲ್ಲಿರುವ ನಿರ್ವಾಹಕರೊಂದಿಗೆ ಹೇಗೆ ಸಹಯೋಗ ನಡೆಸಿದನು ಮತ್ತು ಭಾರತ ಅಥವಾ ಕೆನಡಾದಲ್ಲಿ ಇನ್ನಷ್ಟು ಕಾರ್ಯಕರ್ತರು ಸಕ್ರಿಯರಾಗಿದ್ದಾರೆಯೇ ಎಂಬುದನ್ನು ಅವರು ಈಗ ಪರಿಶೀಲಿಸುತ್ತಿದ್ದಾರೆ. ವಿಚಾರಣೆಯು ಗೋಲ್ಡಿ ಬ್ರಾರ್‌ನ ಸುತ್ತಲಿನ ವ್ಯಾಪಕ ಜಾಲ ಮತ್ತು ದಾಳಿಗಳ ಹಿಂದೆ ಇರುವ ಉದ್ದೇಶವನ್ನು ಗಮನದಲ್ಲಿ ಇಟ್ಟುಕೊಂಡು ನಡೆಯಲಿದೆ ಎಂದು ನಿರೀಕ್ಷಿಸಲಾಗಿದೆ. ಬಂಧಿತನಿಂದ ಒಂದು ಚೀನೀ ಪಿಸ್ತೂಲ್ ಮತ್ತು ಕಾರ್ಟ್ರಿಡ್ಜ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ. ಪಿತೂರಿಯಲ್ಲಿ ಅವನ ಪಾತ್ರ ಮತ್ತು ವಿದೇಶಿ ಕಾರ್ಯಕರ್ತರೊಂದಿಗಿನ ಅವನ ಸಂಪರ್ಕದ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!