ಉದಯವಾಹಿನಿ, ಮಲೇಷ್ಯಾ : ಉಬುಂಟು ಒಕ್ಕೂಟದ ಅಧ್ಯಕ್ಷೆ ಹಾಗೂ ಕರ್ನಾಟಕ ಸರ್ಕಾರದ ಮಾಜಿ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ ಅವರಿಗೆ ( ಇತ್ತೀಚೆಗೆ ಮಲೇಷ್ಯಾದಲ್ಲಿ ನಡೆದ ಯುಎನ್ ಎಕನಾಮಿಕ್ ಶೃಂಗಸಭೆಯಲ್ಲಿ ಬ್ರಿಕ್ಸ್-ಆಸಿಯಾನ್ ಚೇಂಬರ್ ಆಫ್ ಕಾಮರ್ಸ್ (BACC) ವತಿಯಿಂದ ಪ್ರತಿಷ್ಠಿತ ‘ಟುನ್ ಡಾ. ಮಹಾತಿರ್ ಮೊಹಮ್ಮದ್ ಗುಡ್ ಗ್ಲೋಬಲ್ ಎಕ್ಸೆಂಪ್ಲರಿ ಲೀಡರ್‌ಶಿಪ್ ಅವಾರ್ಡ್’ ನೀಡಿ ಗೌರವಿಸಲಾಯಿತು. ಬ್ರಿಕ್ಸ್-ಆಸಿಯಾನ್ ಕೌನ್ಸಿಲ್ ಅಧ್ಯಕ್ಷ ಹಾಗೂ ನೈಜೀರಿಯಾದ ರಾಯಭಾರಿ ಥಯಾಲನ್ ನಾಥನ್ ಪ್ರಶಸ್ತಿ ಪ್ರದಾನ ಮಾಡಿದರು. ಉಬುಂಟು ಒಕ್ಕೂಟದ ಜಂಟಿ ಕಾರ್ಯದರ್ಶಿ ಜ್ಯೋತಿ ಬಾಲಕೃಷ್ಣ ಉಪಸ್ಥಿತರಿದ್ದರು.
ಸಮುದಾಯ ಅಭಿವೃದ್ಧಿ, ಸಂಸ್ಥೆಗಳ ಬಲವರ್ಧನೆ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ರತ್ನಪ್ರಭಾ ಅವರ ವಿಶಿಷ್ಟ ನಾಯಕತ್ವ ಮತ್ತು ಅವರ ಸುಸ್ಥಿರ ಕೊಡುಗೆಗಳಿಗಾಗಿ ಈ ಪ್ರಶಸ್ತಿ ದೊರೆತಿದೆ. ರತ್ನಾಪ್ರಭಾ ಅವರ ಸಾಧನೆಗಳು, ಆಡಳಿತಾತ್ಮಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿನ ಅವರ ಉಪಕ್ರಮಗಳ ಸಕಾರಾತ್ಮಕ ಪರಿಣಾಮಗಳನ್ನು ಸಮಗ್ರವಾಗಿ ಮೌಲ್ಯಮಾಪನ ನಡೆಸಿ ಕಾರ್ಯಕಾರಿ ಮಂಡಳಿಯು ಅವರನ್ನು ಗುರುತಿಸಿದೆ.
ಪ್ರಶಸ್ತಿ ಸ್ವೀಕರಿಸಿ ಬಳಿಕ ಮಾತನಾಡಿದ ಕೆ. ರತ್ನಪ್ರಭಾ, ಈ ಗೌರವದಿಂದ ಉಟುಂಬು ಸಂಸ್ಥೆಗೆ ಆನೆ ಬಲ ಸಿಕ್ಕಂತಾಗಿದ್ದು, ಇದರಿಂದ ನಮ್ಮ ಧ್ಯೇಯದಲ್ಲಿ ಯಾವುದೇ ಬದಲಾವಣೆಯಾಗುವುದಿಲ್ಲ. ಪ್ರಶಸ್ತಿಗಳು ಎಷ್ಟೇ ಬಂದರೂ ಸಹ ನಾವು 10,000 ಮಹಿಳಾ ಉದ್ಯಮಿಗಳನ್ನು ತಲುಪುವ, ಅವರಿಗೆ ಡಿಜಿಟಲ್ ಮಾರ್ಕೆಟಿಂಗ್ ತರಬೇತಿ ನೀಡುವ, 100 ಸಂಘಗಳಿಗೆ ವಿಸ್ತರಿಸುವ, ರಫ್ತು ಸುಗಮಗೊಳಿಸುವ ಮತ್ತು ಭಾರತ ಹಾಗೂ ವಿಶ್ವದಾದ್ಯಂತ ಪಾಲುದಾರಿಕೆ ಹೊಂದುವ ಗುರಿಯನ್ನು ಮುಂದುವರಿಸುತ್ತೇವೆ ಎಂದು ತಿಳಿಸಿದರು.
ಉಬುಂಟು ಸ್ಥಾಪನೆಗೂ ಮುನ್ನ ಕೆ. ರತ್ನಪ್ರಭಾ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿಯಾಗಿ (2014-16) ಕರ್ತವ್ಯ ನಿರ್ವಹಿಸಿದ್ದರು. 2014-19ರಲ್ಲಿ ಕರ್ನಾಟಕದ ಕೈಗಾರಿಕಾ ನೀತಿಯನ್ನು ರೂಪಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದರು. ಈ ನೀತಿಯಲ್ಲಿ ಮಹಿಳಾ ಉದ್ಯಮಿಗಳಿಗೆ ವಿಶೇಷ ಒತ್ತು ನೀಡಲಾಗಿತ್ತು. ಮೊದಲ ಬಾರಿಗೆ ಮಹಿಳಾ ಉದ್ಯಮಿಗಳಿಗಾಗಿಯೇ ಪ್ರತ್ಯೇಕ ನೀತಿಯನ್ನು ಜಾರಿಗೊಳಿಸಿದ್ದು, ವಿಶೇಷ ಪ್ರೋತ್ಸಾಹ, ರಿಯಾಯಿತಿ ಮತ್ತು ಬೆಂಬಲ ನೀಡುವ ಕ್ರಮಗಳನ್ನು ಅಳವಡಿಸಲಾಗಿತ್ತು.

Leave a Reply

Your email address will not be published. Required fields are marked *

error: Content is protected !!