ಉದಯವಾಹಿನಿ, ಲಂಡನ್ : ಗಾಝಾದಲ್ಲಿ ಕದನ ವಿರಾಮದ ಹೊರತಾಗಿಯೂ ನಿರ್ಣಾಯಕ ನೆರವಿನ ಪೂರೈಕೆಗೆ ನಿರ್ಬಂಧ, ಹೊಸ ದಾಳಿಗಳನ್ನು ನಡೆಸುವ ಮೂಲಕ ಇಸ್ರೇಲ್ ಅಧಿಕಾರಿಗಳು ಈಗಲೂ ಜನಾಂಗೀಯ ಹತ್ಯೆಯನ್ನು ಮುಂದುವರಿಸಿದ್ದಾರೆ ಎಂದು ಮಾನವ ಹಕ್ಕುಗಳ ಗುಂಪು ‘ಆ್ಯಮೆಸ್ಟಿ ಇಂಟರ್ ನ್ಯಾಷನಲ್’ ಗುರುವಾರ ಎಚ್ಚರಿಕೆ ನೀಡಿದೆ.
ಅಕ್ಟೋಬರ್ 10ರಂದು ಗಾಝಾದಲ್ಲಿ ಕದನ ವಿರಾಮ ಜಾರಿಗೆ ಬಂದಂದಿನಿಂದ ಇಸ್ರೇಲ್ ನಿರಂತರವಾಗಿ ಕದನ ವಿರಾಮ ಉಲ್ಲಂಘಿಸಿದ್ದು (7 ವಾರಗಳಲ್ಲಿ 500ಕ್ಕೂ ಹೆಚ್ಚು ಬಾರಿ) ಕನಿಷ್ಠ 347 ಫೆಲೆಸ್ತೀನೀಯರನ್ನು ಹತ್ಯೆ ಮಾಡಿದ್ದು 889 ಮಂದಿ ಗಾಯಗೊಂಡಿದ್ದಾರೆ. ಈ ಮಧ್ಯೆ ಬುಧವಾರ ದಕ್ಷಿಣ ಮತ್ತು ಮಧ್ಯ ಗಾಝಾದಲ್ಲಿ ಇಸ್ರೇಲಿ ಪಡೆಗಳು ಸರಣಿ ವೈಮಾನಿಕ ದಾಳಿ ನಡೆಸಿರುವುದಾಗಿ ವರದಿಯಾಗಿದೆ.
`ತನ್ನ ಅಪರಾಧಗಳ ಮಾರಣಾಂತಿಕ ಪರಿಣಾಮಗಳನ್ನು ಹಿಮ್ಮೆಟ್ಟಿಸಲು ಇದುವರೆಗೆ ಇಸ್ರೇಲ್ ಗಂಭೀರ ಕ್ರಮಗಳನ್ನು ಕೈಗೊಂಡಿರುವ ಸೂಚನೆಗಳಿಲ್ಲ ಮತ್ತು ಅದರ ಉದ್ದೇಶ ಬದಲಾಗಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ವಾಸ್ತವವಾಗಿ ಇಸ್ರೇಲಿ ಅಧಿಕಾರಿಗಳು ತಮ್ಮ ನಿರ್ದಯ ನೀತಿಗಳನ್ನು ಮುಂದುವರಿಸುತ್ತಿದ್ದಾರೆ. ಪ್ರಮುಖ ಮಾನವೀಯ ನೆರವು ಮತ್ತು ಅಗತ್ಯದ ಸೇವೆಗಳಿಗೆ ಪ್ರವೇಶಗಳನ್ನು ನಿರ್ಬಂಧಿಸುತ್ತಿದ್ದಾರೆ ಮತ್ತು ಗಾಝಾದಲ್ಲಿ ಫೆಲೆಸ್ತೀನೀಯರನ್ನು ಭೌತಿಕವಾಗಿ ನಾಶ ಮಾಡಲು ಉದ್ದೇಶಪೂರ್ವಕವಾಗಿ ಷರತ್ತುಗಳನ್ನು ವಿಧಿಸುತ್ತಿದ್ದಾರೆ’ ಎಂದು ಆ್ಯಮೈಸ್ಟಿಯ ಪ್ರಧಾನ ಕಾರ್ಯದರ್ಶಿ ಆ್ಯಗ್ನೆಸ್ ಕ್ಯಾಲಮರ್ಡ್ ಹೇಳಿದ್ದಾರೆ. ಜಗತ್ತನ್ನು ಮೋಸಗೊಳಿಸಬಾರದು. ಇಸ್ರೇಲ್ ನ ನರಮೇಧ ಇನ್ನೂ ಮುಗಿದಿಲ್ಲ’ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!