ಉದಯವಾಹಿನಿ,  ಇರಾನ್​​: ಟ್ರಂಪ್​ ಅವರ ಆಡಳಿತ ವೈಖರಿ ಇಸ್ಲಾಮಿಕ್​ ಗಣರಾಜ್ಯಗಳೊಂದಿಗೆ ಸಂಪರ್ಕ ಅಥವಾ ಸಹಕಾರಕ್ಕೆ ಯೋಗ್ಯವಾಗಿಲ್ಲ ಎಂದು ಹೇಳುವ ಮೂಲಕ ಇರಾನ್​ನ ಸರ್ವೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿ ವಾಷಿಂಗ್ಟನ್​ ಜೊತೆಗಿನ ಮಾತುಕತೆ ಸಾಧ್ಯತೆಯನ್ನು ತಳ್ಳಿಹಾಕಿದ್ದಾರೆ.
ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ ಅಡಿಯಲ್ಲಿ ಅರೆಸೈನಿಕ ಪಡೆ ಬಸಿಜ್​ಗಾಗಿ ರಾಷ್ಟ್ರೀಯ ದಿನವನ್ನು ಗುರುತಿಸುವ ದೂರದರ್ಶನದ ಭಾಷಣದಲ್ಲಿ ಅವರು ಮಾತನಾಡಿದರು. ಇರಾನ್​ ವಾಷಿಂಗ್ಟನ್​ ಜೊತೆ ಸಂದೇಶಗಳನ್ನು ವಿನಿಮಯ ಮಾಡಿಕೊಂಡಿದೆ ಎನ್ನುವುದನ್ನು ನಿರಾಕರಿಸಿದ ಅವರು ವರದಿಗಳನ್ನು ಶುದ್ಧ ಸುಳ್ಳು ಎಂದು ಹೇಳಿದರು. ಇರಾನ್​ ಜೊತೆಗಿನ ಮಾತುಕತೆಗೆ ಸಮರ್ಥನೆ ನೀಡುವ ಯಾವುದೇ ಗುಣಗಳನ್ನು ಅಮೆರಿಕ ತೋರಿಸಿಲ್ಲ. ಇಂತಹ ಸರ್ಕಾರ ಇಸ್ಲಾಮಿಕ್​ ಗಣರಾಜ್ಯದಂತಹ ಸರ್ಕಾರದ ಜೊತೆಗೆ ಸಂಪರ್ಕದಲ್ಲಿರಲು ಅಥವಾ ಸಹಕಾರ ಬಯಸಲು ಅರ್ಹವಲ್ಲ ಎಂದು ಅವರು ಹೇಳಿದರು.
ಜೂನ್‌ನಲ್ಲಿ ಇಸ್ರೇಲ್ ಮತ್ತು ಇರಾನ್ ನಡುವಿನ 12 ದಿನಗಳ ಯುದ್ಧದ ಸಮಯದಲ್ಲಿ ಯುನೈಟೆಡ್ ಸ್ಟೇಟ್ಸ್ ಮತ್ತು ಇಸ್ರೇಲ್ ಮಾತುಕತೆ ಯಾವುದೇ ಫಲ ನೀಡುವಲ್ಲಿ ವಿಫಲವಾಗಿವೆ. ಈ ಘರ್ಷಣೆಯು ಇರಾನಿನ ಪರಮಾಣು ತಾಣಗಳ ಮೇಲೆ ನೇರ ದಾಳಿಗೆ ಕಾರಣವಾಯಿತು. ಇಸ್ರೇಲ್​ ಇರಾನಿನ ಭೂಪ್ರದೇಶದ ಮೇಲೆ ದೊಡ್ಡ ಪ್ರಮಾಣದ ಬಾಂಬ್​ ದಾಳಿ ಪ್ರಾರಂಭಿಸಿತು. ಇದಕ್ಕೆ ಪ್ರತಿಯಾಗಿ ಟೆಹ್ರಾನ್​ನಿಂದ ಕ್ಷಿಪಣಿ ಹಾಗೂ ಡ್ರೋನ್​ ದಾಳಿಗಳು ಆರಂಭಗೊಂಡು, ಯುದ್ಧಗಳು ಪ್ರಾರಂಭವಾದವು ಎಂದು ಹೇಳಿದರು.

ದಾಳಿಗಳು ಏಪ್ರಿಲ್‌ನಲ್ಲಿ ಪ್ರಾರಂಭವಾದ ಟೆಹ್ರಾನ್ ಮತ್ತು ವಾಷಿಂಗ್ಟನ್ ನಡುವಿನ ಪರಮಾಣು ಮಾತುಕತೆಯನ್ನು ಕೂಡ ಹಳಿತಪ್ಪಿಸಿತು. ಭಾಷಣದಲ್ಲಿ ಯುದ್ಧದ ಸಮಯದಲ್ಲಿ ಇರಾನ್‌ನ ಸಾರ್ವಜನಿಕ ಏಕತೆಯನ್ನು ಶ್ಲಾಘಿಸಿದ ಖಮೇನಿ, ವ್ಯವಸ್ಥೆಯೊಂದಿಗೆ ಭಿನ್ನಾಭಿಪ್ರಾಯ ಹೊಂದಿರುವವರು ಸಹ ಅದರ ಪರವಾಗಿ ನಿಂತರು. ಈ ಒಗ್ಗಟ್ಟನ್ನು ಸಂರಕ್ಷಿಸಬೇಕು ಮತ್ತು ಪ್ರಶಂಸಿಸಬೇಕು ಎಂದು ಹೇಳಿದರು. ಯುದ್ಧದ ಸಮಯದಲ್ಲಿ ಇಸ್ರೇಲ್ ನಡೆಸಿದ ದಾಳಿಗಳು ಇಸ್ಲಾಮಿಕ್ ಗಣರಾಜ್ಯವನ್ನು ದುರ್ಬಲಗೊಳಿಸಲು, ಅಶಾಂತಿಯನ್ನು ಬಿತ್ತಲು ಮತ್ತು ವ್ಯವಸ್ಥೆಯನ್ನು ಉರುಳಿಸಲು, ಜನರನ್ನು ಬೀದಿಗೆ ತರಲು ಪ್ರಯತ್ನಿಸಿದ್ದವು ಎಂದು ಖಮೇನಿ ಈ ಹಿಂದೆ ಹೇಳಿದ್ದರು.

Leave a Reply

Your email address will not be published. Required fields are marked *

error: Content is protected !!