
ಉದಯವಾಹಿನಿ, ಗಾಝಾ: ಗಾಝಾದಲ್ಲಿ ಇಸ್ರೇಲ್ ನಡೆಸುತ್ತಿರುವ ಜನಾಂಗೀಯ ನರಮೇಧವನ್ನು ಖಂಡಿಸಿ ಮತ್ತು ಅದರ ನಿರಂತರ ಕದನ ವಿರಾಮ ಉಲ್ಲಂಘನೆಗಳ ವಿರುದ್ಧ ಜಾಗತಿಕ ಕ್ರಮಕ್ಕೆ ಆಗ್ರಹಿಸಿ ಯುರೋಪ್‌ನಾದ್ಯಂತ ಹಲವಾರು ನಗರಗಳಲ್ಲಿ ಲಕ್ಷಾಂತರ ಜನರು ಪ್ರತಿಭಟನಾ ಜಾಥಾಗಳನ್ನು ನಡೆಸಿದರು.
ಫೆಲೆಸ್ತೀನ್ ಜನತೆಯೊಂದಿಗೆ ಒಗ್ಗಟ್ಟಿನ ವಿಶ್ವಸಂಸ್ಥೆಯ ಅಂತಾರಾಷ್ಟ್ರೀಯ ದಿನದ ಅಂಗವಾಗಿ ಈ ಪ್ರತಿಭಟನೆಗಳು ನಡೆದವು. ಇದೇ ವೇಳೆ, ಗಾಝಾದಲ್ಲಿ ಇಸ್ರೇಲ್ ಯುದ್ದದಿಂದ ಮೃತರ ಸಂಖ್ಯೆ 70,000ವನ್ನು ದಾಟಿದೆ. ಎಂಟು ಮತ್ತು ಹತ್ತರ ಹರೆಯದ ಇಬ್ಬರು ಬಾಲಕರು ಇತ್ತೀಚಿನ ಬಲಿಪಶುಗಳಾಗಿದ್ದಾರೆ. ಬನಿ ಸುಹೈಲಾದಲ್ಲಿ ಇಸ್ರೇಲ್ ಡೋನ್ ದಾಳಿಯಲ್ಲಿ ಈ ಎಳೆಯ ಜೀವಗಳು ಮೃತಪಟ್ಟಿವೆ.
ಫ್ರಾನ್ಸ್‌ನ ರಾಜಧಾನಿ ಪ್ಯಾರಿಸ್‌ನಲ್ಲಿ ಸುಮಾರು 50,000 ಜನರು ‘ಗಾಝಾ, ಪ್ಯಾರಿಸ್ ನಿಮ್ಮೊಂದಿಗಿದೆ’ ಮತ್ತು ‘ಪ್ಯಾರಿಸ್‌ನಿಂದ ಗಾಝಾಕ್ಕೆ ಪ್ರತಿರೋಧ’ ಎಂಬ ಘೋಷಣೆಗಳನ್ನು ಕೂಗುತ್ತ ನಗರದ ಪ್ರಮುಖ ಬೀದಿಗಳಲ್ಲಿ ಜಾಥಾ ನಡೆಸಿದರು. ಇಸ್ರೇಲ್ ನರಮೇಧವನ್ನು ಖಂಡಿಸುತ್ತ ಫೆಲೆಸ್ತೀನ್ ಧ್ವಜಗಳನ್ನೂ ಬೀಸಿದರು.
ಅಲ್ ಜಝೀರಾ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಪ್ರತಿಭಟನಾಕಾರನೋರ್ವ,ಇದು ಸ್ವೀಕಾರಾರ್ಹವಲ್ಯನಾವು ಇನ್ನೂ ನ್ಯಾಯ ಮತ್ತು ಉತ್ತರದಾಯಿತ್ವದಿಂದ ಬಹಳ ದೂರವಿದ್ದೇವೆ’ ಎಂದು ಹೇಳಿದರೆ, ‘ಇಸ್ರೇಲ್ ಯುದ್ಧವು ತಪ್ಪು ಎಂದು ಜನರಿಗೆ ತಿಳಿದಿದೆ. ಆದರೆ ಅಧಿಕಾರದಲ್ಲಿರುವ ಜನರಿಗೇಕೆ ಅದು ತಪ್ಪು ಎಂದು ಅನಿಸುತ್ತಿಲ್ಲ ಎಂದು ಇನ್ನೋರ್ವ ಪ್ರಶ್ನಿಸಿದ.
