ಉದಯವಾಹಿನಿ, ಸ್ಟಾಕ್ಟನ್, ಕ್ಯಾಲಿಫೋರ್ನಿಯಾ: ಇಲ್ಲಿನ ಬ್ಯಾಂಕ್ವೆಟ್ ಹಾಲ್ವೊಂದರಲ್ಲಿ ಕೌಟುಂಬಿಕ ಕಾರ್ಯಕ್ರಮದ ವೇಳೆ ಅಪರಿಚಿತರು ನಡೆಸಿದ ಗುಂಡಿನ ದಾಳಿಯಲ್ಲಿ ನಾಲ್ವರು ಮೃತಪಟ್ಟು, 10 ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬ್ಯಾಂಕ್ವೆಟ್ ಹಾಲ್ ಒಳಗೆ ಸಂಜೆಯ ವೇಳೆ ಗುಂಡಿನ ದಾಳಿ ನಡೆದಿದೆ. ಮೃತರಲ್ಲಿ ಮಕ್ಕಳು ಮತ್ತು ವಯಸ್ಕರು ಸೇರಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಇದೊಂದು ಟಾರ್ಗೆಟ್ ಮಾಡಿ ನಡೆಸಿರುವ ದಾಳಿ ಎಂಬ ಶಂಕೆ ವ್ಯಕ್ತವಾಗಿದೆ ಎಂದು ಸ್ಯಾನ್ ಜೊವಾಕ್ವಿನ್ ಕೌಂಟಿ ಶೆರಿಫ್ ಕಚೇರಿಯ ವಕ್ತಾರ ಹೀದರ್ ಬ್ರೆಂಟ್ ಹೇಳಿದ್ದಾರೆ. ಶಂಕಿತ ಶೂಟರ್‌ನ ಬಂಧನವಾಗಿಲ್ಲ. ತನಿಖಾಧಿಕಾರಿಗಳು ಘಟನೆಯ ಹಿಂದಿನ ಕಾರಣ ತಿಳಿಯಲು ಕೆಲಸ ಮಾಡುತ್ತಿದ್ದಾರೆ ಎಂದಿರುವ ಸ್ಥಳೀಯ ಅಧಿಕಾರಿಗಳು, ಆರೋಪಿಯ ಪತ್ತೆಗೆ ಸಹಾಯ ಮಾಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.”ಕುಟುಂಬಸ್ಥರು ಗಾಯಗೊಂಡಿರುವ ತಮ್ಮ ಪ್ರೀತಿಪಾತ್ರರ ಪಕ್ಕದಲ್ಲಿ ನಿಂತು, ಅವರು ಬದುಕುಳಿಯಲಿ ಎಂದು ಪ್ರಾರ್ಥಿಸಬೇಕು” ಎಂದು ಮೇಯರ್ ಕ್ರಿಸ್ಟಿನಾ ಫುಗಾಝಿ ಹೇಳಿದರು. ಗಾಯಾಳುಗಳ ಆರೋಗ್ಯ ಸ್ಥಿತಿಗತಿ ಬಗ್ಗೆ ಅಧಿಕಾರಿಗಳು ಹೆಚ್ಚು ಮಾಹಿತಿ ನೀಡಲಿಲ್ಲ.ಸ್ಟಾಕ್ಟನ್ ನಗರವು ಸ್ಯಾಕ್ರಮೆಂಟೋದಿಂದ ದಕ್ಷಿಣಕ್ಕೆ ಸುಮಾರು 64 ಕಿಲೋಮೀಟರ್ ದೂರದಲ್ಲಿದ್ದು, 3,20,000 ಜನಸಂಖ್ಯೆ ಇದೆ.
ಶ್ವೇತಭವನದ ಬಳಿ ದಾಳಿ, ಆಫ್ಘನ್ ವ್ಯಕ್ತಿಯ ವಿರುದ್ಧ ಕೊಲೆ ಪ್ರಕರಣ ದಾಖಲು: ಶ್ವೇತಭವನ ಬಳಿ ಇಬ್ಬರು ರಾಷ್ಟ್ರೀಯ ಗಾರ್ಡ್ ಸೈನಿಕರ ಮೇಲೆ ಗುಂಡು ಹಾರಿಸಿ ಕೊಂದ ಆರೋಪದ ಮೇಲೆ ಅಫ್ಘಾನ್ ಪ್ರಜೆಯೊಬ್ಬರ ಮೇಲೆ ಕೊಲೆ ಹಾಗೂ ಎರಡು ಬಾರಿ ಶಸ್ತ್ರಸಜ್ಜಿತವಾಗಿ ಕೊಲ್ಲುವ ಉದ್ದೇಶದಿಂದ ಹಲ್ಲೆ ನಡೆಸಿದ ಆರೋಪ ಹೊರಿಸಲಾಗುವುದು ಎಂದು ಕೊಲಂಬಿಯಾ ಜಿಲ್ಲೆಯ ಅಮೆರಿಕದ ವಕೀಲರು ಶುಕ್ರವಾರ ಘೋಷಿಸಿತ್ತು.ಶ್ವೇತಭವನದ ಬಳಿ ಬುಧವಾರ ಮಧ್ಯಾಹ್ನ ನಡೆದ ಗುಂಡಿನ ದಾಳಿಯ ನಂತರ ತಜ್ಞೆ ಸಾರಾ ಬೆಕ್‌ಸ್ಟ್ರೋಮ್ (20) ಮತ್ತು ಸ್ಟಾಫ್ ಸಾರ್ಜೆಂಟ್ ಆಂಡ್ರ್ಯೂ ವೋಲ್ಫ್ (24) ಅವರನ್ನು ಗಂಭೀರವಾಗಿ ಗಾಯಗೊಂಡಿದ್ದರು. ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗುರುವಾರ ಸಂಜೆ ಬೆಕ್‌ಸ್ಟ್ರೋಮ್ ನಿಧನರಾಗಿದ್ದಾರೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಕಟಿಸಿದ್ದರು.
ಈ ಗುಂಡಿನ ದಾಳಿ ಪ್ರಕರಣದಲ್ಲಿ ಶಂಕಿತನಾಗಿದ್ದ ಅಫ್ಘಾನಿಸ್ತಾನ ಯುದ್ಧದ ಸಮಯದಲ್ಲಿ ಸಿಐಎ ಜೊತೆ ಕೆಲಸ ಮಾಡಿದ್ದ 29 ವರ್ಷದ ಆಫ್ಘನ್ ಪ್ರಜೆ ರಹಮಾನುಲ್ಲಾ ಲಕನ್ವಾಲ್ ವಿರುದ್ಧ ಇದೀಗ ಪ್ರಥಮ ದರ್ಜೆ ಕೊಲೆ ಆರೋಪ ಹೊರಿಸಲಾಗಿದೆ. ಹಾಗೇ ಶಸ್ತ್ರಸಜ್ಜಿತವಾಗಿ ಕೊಲ್ಲುವ ಉದ್ದೇಶದಿಂದ ಎರಡು ಹಲ್ಲೆಗಳನ್ನು ಮಾಡಲಾಗಿದೆ ಎಂಬ ಆರೋಪಗಳನ್ನು ಹೊರಿಸಲಾಗಿದೆ ಎಂದು ಯುಎಸ್ ಅಟಾರ್ನಿ ಜೀನೈನ್ ಪಿರೋ ತಿಳಿಸಿದ್ದರು.
