ಉದಯವಾಹಿನಿ : ಭಾರತ ತನ್ನ ರಕ್ಷಣಾ ಸಾಮರ್ಥ್ಯ, ಆರ್ಥಿಕ ಶಕ್ತಿ ಮತ್ತು ಜಾಗತಿಕ ಪ್ರಭಾವದ ಆಧಾರದ ಮೇಲೆ ಅಪ್ರತಿಮ ಏರಿಕೆಯನ್ನು ದಾಖಲಿಸಿದೆ. ಆಸ್ಟ್ರೇಲಿಯಾದ ಖ್ಯಾತ ಚಿಂತಕ ಚಾವಡಿ ಲೋವಿ ಇನ್‌ಸ್ಟಿಟ್ಯೂಟ್ ಬಿಡುಗಡೆ ಮಾಡಿರುವ ಏಷ್ಯಾ ಪವರ್ ಇಂಡೆಕ್ಸ್ 2025 ವರದಿಯ ಪ್ರಕಾರ, ಭಾರತವು ಈಗ ಅಮೆರಿಕಾ ಹಾಗೂ ಚೀನಾ ನಂತರ ಏಷ್ಯಾದ ಮೂರನೇ ಅತಿದೊಡ್ಡ ರಕ್ಷಣಾ ಶಕ್ತಿ. ವರದಿ ಭಾರತದ ಸೈನಿಕ ಸಾಮರ್ಥ್ಯದಲ್ಲಿ ಆಪರೇಷನ್ “ಸಿಂಧೂರ್” ಪ್ರಮುಖ ಪಾತ್ರ ವಹಿಸಿದೆ ಎಂದು ವಿಶೇಷವಾಗಿ ಉಲ್ಲೇಖಿಸಿದೆ. ಈ ಆಪರೇಷನ್ ಭಾರತೀಯ ರಕ್ಷಣಾ ವ್ಯವಸ್ಥೆಯ ಸಾಮರ್ಥ್ಯ, ಪ್ರತಿಕ್ರಿಯಾಶೀಲತೆ ಮತ್ತು ಜಾಗತಿಕ ಮಟ್ಟದ ಕಾರ್ಯಚರಣಾ ಕೌಶಲ್ಯವನ್ನು ಸ್ಪಷ್ಟಪಡಿಸಿದೆ.

ಏಷ್ಯಾ ಪವರ್ ಇಂಡೆಕ್ಸ್‌ನಲ್ಲಿ ಭಾರತವು ಹಲವಾರು ಪ್ರಮುಖ ದೇಶಗಳನ್ನು ಹಿಂದಿಕ್ಕಿದೆ. ಸೈನಿಕ ಬಲ, ಆರ್ಥಿಕ ಸಾಮರ್ಥ್ಯ, ರಾಜತಾಂತ್ರಿಕ ಪ್ರಭಾವ ಮತ್ತು ಭವಿಷ್ಯದ ಸಂಪನ್ಮೂಲಗಳಂತಹ ಪ್ರಮುಖ ಮಾನದಂಡಗಳ ಆಧಾರದ ಮೇಲೆ ಭಾರತ ಜಪಾನ್, ರಷ್ಯಾ, ಆಸ್ಟ್ರೇಲಿಯಾ ಮತ್ತು ದಕ್ಷಿಣ ಕೊರಿಯಾ ದೇಶಗಳನ್ನು ಮೀರಿಸಿದೆ. ಪಾಕಿಸ್ತಾನವು ಈ ಪಟ್ಟಿಯಲ್ಲಿ 16ನೇ ಸ್ಥಾನ ಗಳಿಸಿದ್ದು, ಭಾರತಕ್ಕೆ ಬಹುದೂರ ಹಿಂದಿದೆ. ಈ ವರದಿ ಭಾರತಕ್ಕೆ ಕೇವಲ ರಕ್ಷಣಾ ಬಲವರ್ಧನೆಗಷ್ಟೇ ಮಾನ್ಯತೆ ನೀಡಿಲ್ಲ; ಬದಲಾಗಿ ಅದು ಜಾಗತಿಕ ರಾಜತಾಂತ್ರಿಕ ಪ್ರಭಾವ, ಆರ್ಥಿಕ ವೇಗ, ಭವಿಷ್ಯದ ಸಾಮರ್ಥ್ಯ, ಸಾಂಸ್ಕೃತಿಕ ಹಿರಿಮೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಭಾರತದ ಏರಿಕೆಯನ್ನು ಒಪ್ಪಿಕೊಂಡಿದೆ.
ವರದಿ ಪ್ರಕಾರ ಭಾರತದ ವೇಗವಾದ ಆರ್ಥಿಕ ಬೆಳವಣಿಗೆಯನ್ನು ವಿಶೇಷವಾಗಿ ಗುರುತಿಸಿದೆ. 2025ರಲ್ಲಿ ಭಾರತದ GDP ಬೆಳವಣಿಗೆಯ ವೇಗವು ಇತರೆ ಪ್ರಮುಖ ರಾಷ್ಟ್ರಗಳಿಗಿಂತ ಹೆಚ್ಚು ಇದ್ದು, ಇದರ ಅರ್ಥವ್ಯವಸ್ಥೆಯ ಶಕ್ತಿಯನ್ನು ಹೆಚ್ಚಿಸಿದೆ. ಈ ಮೂಲಕ ಭಾರತವು ಆರ್ಥಿಕ ಸಾಮರ್ಥ್ಯ ವಿಭಾಗದಲ್ಲಿ ಜಪಾನ್ ಅನ್ನು ಮೀರಿಸಿ ಒಂದು ಸ್ಥಾನ ಮೇಲಕ್ಕೆ ಬಂದಿದೆ.

Leave a Reply

Your email address will not be published. Required fields are marked *

error: Content is protected !!