ಉದಯವಾಹಿನಿ, ಬೆಂಗಳೂರು: ಮಾನಸಿಕ ಖಿನ್ನತೆಯಿಂದ ಇಬ್ಬರು ಮಕ್ಕಳನ್ನ ಅನಾಥರನ್ನಾಗಿ ಮಾಡಿ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ತೋಟದ ಗುಡ್ಡದಹಳ್ಳಿಯಲ್ಲಿ ನಡೆದಿದೆ.
ಸೌಭಾಗ್ಯ (31) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ತಾಯಿ. ಈಕೆ ತನ್ನ ಇಬ್ಬರು ಮಕ್ಕಳ ಜೊತೆಗೆ ಬೆಂಗಳೂರು ಉತ್ತರ ತಾಲೂಕಿನ ತೋಟದ ಗುಡ್ಡದಹಳ್ಳಿಯಲ್ಲಿ ವಾಸವಾಗಿದ್ದರು. ಸೌಭಾಗ್ಯ ಎರಡು ವರ್ಷದ ಹಿಂದೆ ಗಂಡನನ್ನ ಕಳೆದುಕೊಂಡಿದ್ದರು. ಮೂಲತಃ ಕೈವಾರದ ಮೂಲ ನಿವಾಸಿಯಾಗಿರುವ ಸೌಭಾಗ್ಯ ಬೆಂಗಳೂರಿನ ತೋಟದಗುಡ್ಡದಹಳ್ಳಿಯ ಸಾಯಿ ರಾಮ ಲೇಔಟ್‌ನಲ್ಲಿ ಮನೆ ಬಾಡಿಗೆ ಪಡೆದು ಇದ್ದರು.
ಇಬ್ಬರು ಮಕ್ಕಳ ಜೊತೆ ಬಾಡಿಗೆ ಮಾನೆಯಲ್ಲಿ ವಾಸ ಮಾಡಿಕೊಂಡು ದೇವಸ್ಥಾನದಲ್ಲಿ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದರು. ಗಂಡನಿಲ್ಲ ಎಂಬ ವಿಚಾರದಲ್ಲಿ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಜೊತೆಗೆ ಡೆತ್ ನೋಟ್ ಬರೆದಿಟ್ಟು ಸೌಭಾಗ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
