ಉದಯವಾಹಿನಿ, ದೊಡ್ಡಬಳ್ಳಾಪುರ: ಬಿಎಸ್ಸಿ ಕಂಪ್ಯೂಟರ್ ಸೈನ್ಸ್ ಓದಿ ಕೃಷಿಯಲ್ಲಿ ಸಾಧನೆ ಮಾಡಬೇಕೆಂಬ ಹಂಬಲ ಹೊಂದಿದ್ದ ಯುವಕನೊರ್ವ ಕಾಶ್ಮೀರದಲ್ಲಿ ಬೆಳೆಯುವ ಕೇಸರಿಯನ್ನ ಬೆಂಗಳೂರು ಗ್ರಾಮಾಂತರದಲ್ಲಿ ಅದ್ರಲ್ಲೂ ಮನೆಯ ಕೋಣೆಯೊಂದರಲ್ಲೇ ಬೆಳೆದು ಎಲ್ಲರು ಹುಬ್ಬೇರಿಸುವಂತೆ ಮಾಡಿದ್ದಾನೆ. ಹೌದು. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರದ ಮಾರುತಿ ನಗರದ ನಿವಾಸಿ ಪವನ್ ಈ ವಿಶಿಷ್ಟ ಪ್ರಯತ್ನಕ್ಕೆ ಕೈಹಾಕಿ ಸೈ ಅನಿಸಿಕೊಂಡು ಎಲ್ಲರ ಮೆಚ್ಚುಗೆಗೂ ಪಾತ್ರವಾಗಿದ್ದಾನೆ. 24 ವರ್ಷದ ಯುವಕ ಪವನ್ ತಮ್ಮ ಮನೆಯಲ್ಲಿಯೇ ಕಾಶ್ಮೀರದ ಹವಾಮಾನ ಸೃಷ್ಟಿ ಮಾಡಿ ಕೇಸರಿ ಬೆಳೆದು ಯಶಸ್ವಿಯಾಗಿದ್ದಾನೆ.
ಅಂದಹಾಗೆ ಈ ಕೇಸರಿ ಗಡ್ಡೆ ವರ್ಷದಲ್ಲಿ ಒಮ್ಮೆ ಮಾತ್ರ ಕೇಸರಿ ಹೂ ಬಿಡುತ್ತೆ. ಅದೂ ಅಕ್ಟೋಬರ್ ಕೊನೆಯ ವಾರದಿಂದ ನವೆಂಬರ್ ಮೊದಲ ವಾರದವರೆಗೆ ಮಾತ್ರ. ಬಳಿಕ ವಾರದಲ್ಲಿ ಹೂ ಖಾಲಿಯಾದ್ರೆ ಮತ್ತೆ ಕೇಸರಿ ಹೂ ಬರುವುದು ಮುಂದಿನ ವರ್ಷಕ್ಕೆ. ಏಪ್ರಿಲ್ ತಿಂಗಳಲ್ಲಿ ಕೇಸರಿ ಗಡ್ಡೆ ನಾಟಿ ಮಾಡಲಾಗುತ್ತದೆ. ಅದು ಸೆಪ್ಟೆಂಬರ್ ತಿಂಗಳಲ್ಲಿ ಮೊಳಕೆ ಬಿಡಲು ಶುರು ಮಾಡಿ, ಅಕ್ಟೋಬರ್ – ನವೆಂಬರ್ ತಿಂಗಳಲ್ಲಿ ಹೂ ಬಿಡುತ್ತೆ.
