ಉದಯವಾಹಿನಿ, ಕೊಲಂಬೋ: ದಿತ್ವಾ ಚಂಡಮಾರುತದ ಅಬ್ಬರಕ್ಕೆ ಉಂಟಾಗಿರುವ ಭೂಕುಸಿತ, ಪ್ರವಾಹದ ಪರಿಣಾಮ ಶ್ರೀಲಂಕಾದಲ್ಲಿ 334 ಮಂದಿ ಸಾವನ್ನಪ್ಪಿದ್ದಾರೆ. ರಕ್ಷಣಾ ಕಾರ್ಯಾಚರಣೆ ಮುಂದುವರಿದಿದ್ದು, ಭಾರತೀಯ ವಾಯುಪಡೆ ಓರ್ವ ಪಾಕ್ ಪ್ರಜೆ ಸೇರಿ 455 ಜನರನ್ನು ರಕ್ಷಿಸಿದೆ.ಶ್ರೀಲಂಕಾ ವಿಪತ್ತು ನಿರ್ವಹಣಾ ಕೇಂದ್ರದ ಮಾಹಿತಿ ಪ್ರಕಾರ, ಪ್ರವಾಹ ಹಾಗೂ ಭೂಕುಸಿತದಲ್ಲಿ ಸಾವನ್ನಪ್ಪಿದವರ ಸಂಖ್ಯೆ 334ಕ್ಕೆ ತಲುಪಿದ್ದು, ಸುಮಾರು 370 ಮಂದಿ ನಾಪತ್ತೆಯಾಗಿದ್ದಾರೆ. ಇನ್ನೂ 2,66,114 ಕುಟುಂಬಗಳ 9,68,304 ಜನರು ಸಂಕಷ್ಟಕ್ಕೆ ಸಿಲುಕಿದ್ದು, ಸಂತ್ರಸ್ತರ ನೆರವಿಗಾಗಿ 919 ಪುನರ್ವಸತಿ ಕೇಂದ್ರ ಸ್ಥಾಪಿಸಲಾಗಿದೆ.
ಆಪರೇಷನ್ ಸಾಗರ ಬಂಧು’ ಅಡಿಯಲ್ಲಿ ಭಾರತ ಶ್ರೀಲಂಕಾಕ್ಕೆ ನೆರವಿನ ಹಸ್ತ ಮುಂದುವರಿಸಿದ್ದು, 80 ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿದ್ದಾರೆ. ಜೊತೆಗೆ ಸಂತ್ರಸ್ತರಿಗೆ ಆಹಾರ, ಔಷಧ ಸೇರಿ ಅಗತ್ಯ ವಸ್ತುಗಳನ್ನು ತಲುಪಿಸಲಾಗಿದೆ.
ಭಾರತೀಯ ವಾಯುಪಡೆಯ Mi-17 ಹೆಲಿಕಾಪ್ಟರ್ ನೆರವಿನಿಂದ ಶ್ರೀಲಂಕಾದಲ್ಲಿ ಸಿಲುಕಿದ್ದ 400 ಭಾರತೀಯರನ್ನು ರಕ್ಷಿಸಿ ಸ್ವದೇಶಕ್ಕೆ ಕಳಿಸಲಾಗಿದ್ದು, ಓರ್ವ ಪಾಕ್ ಪ್ರಜೆಯನ್ನು ರಕ್ಷಿಸಲಾಗಿದೆ. ಅಲ್ಲದೇ ಪೋಲೆಂಡ್ 3, ಬೆಲಾರಸ್ 6, ಇರಾನ್ 5, ಆಸ್ಟ್ರೇಲಿಯಾ 1, ಬಾಂಗ್ಲಾದೇಶ 1, ಜರ್ಮನಿ 2, ದಕ್ಷಿಣ ಆಫ್ರಿಕಾ 4, ಸ್ಲೊವೇನಿಯಾ 2 ಮತ್ತು ಯುನೈಟೆಡ್ ಕಿಂಗ್‌ಡಮ್‌ನ 2 ನಾಗರಿಕರು ಸೇರಿದಂತೆ ಒಟ್ಟು 55 ಜನರನ್ನು ರಕ್ಷಣೆ ಮಾಡಿದೆ. ಚಂಡಮಾರುದಿಂದ ಶ್ರೀಲಂಕಾ ಅಕ್ಷರಶ: ತತ್ತರಿಸಿಹೋಗಿದ್ದು, ಕಲಾನಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಹೀಗಾಗಿ ರಾಜಧಾನಿ ಕೋಲಂಬೊದ ಪೂರ್ವ ಉಪನಗರಗಳಿಗೆ ಕಟ್ಟೆಚ್ಚರ ಘೋಷಿಸಲಾಗಿದೆ. ಅಪಾಯಕಾರಿ ಸ್ಥಳಗಳಲ್ಲಿರುವವರಿಗೆ ಸುರಕ್ಷಿತ ಜಾಗಗಳಿಗೆ ತೆರಳುವಂತೆ ಸೂಚನೆ ನೀಡಲಾಗಿದೆ.

Leave a Reply

Your email address will not be published. Required fields are marked *

error: Content is protected !!