ಉದಯವಾಹಿನಿ, ಹೈದರಾಬಾದ್: ನರ್ಸರಿ ಶಾಲೆಯಲ್ಲಿ ಓದುತ್ತಿರುವ ನಾಲ್ಕು ವರ್ಷದ ಬಾಲಕಿಯ ಮೇಲೆ ಮಹಿಳಾ ಸಿಬ್ಬಂದಿ ಹಲ್ಲೆ ನಡೆಸಿರುವ ಆಘಾತಕಾರಿ ಘಟನೆ ತೆಲಂಗಾಣದ ಹೈದರಾಬಾದ್‌ನಲ್ಲಿ ನಡೆದಿದೆ. ಬಾಲಕಿಯ ಪೋಷಕರು ತಮ್ಮ ಮಗು ಶಾಲಾ ಆರೈಕೆಯಲ್ಲಿದ್ದಾಗ ದೈಹಿಕವಾಗಿ ಹಾನಿಗೊಳಗಾಗಿದ್ದಾಳೆಂದು ಪೊಲೀಸರಿಗೆ ದೂರು ನೀಡಿದ ನಂತರ ಪ್ರಕರಣ ಬೆಳಕಿಗೆ ಬಂದಿದೆ. ಪೋಷಕರ ದೂರಿನ ಮೇರೆಗೆ ಪೊಲೀಸರು, ಶಾಲಾ ನರ್ಸರಿ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ನಂತರ ಮಹಿಳೆಯನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಘಟನೆಯ ಆತಂಕಕಾರಿ ವಿಡಿಯೊ ವೈರಲ್ ಆದ ನಂತರ ಈ ಬೆಳವಣಿಗೆ ಸಂಭವಿಸಿದೆ. ಅದರಲ್ಲಿ ಸಹಾಯಕಿ ಮಗುವನ್ನು ಆಚೆ ಕರೆದುಕೊಂಡು ಹೋಗಿ ಬಲವಂತವಾಗಿ ಹೊಡೆದು ನೆಲಕ್ಕೆ ತಳ್ಳುತ್ತಿರುವುದು ಕಂಡು ಬಂದಿದೆ.
ಮಗುವಿನ ತಲೆಯನ್ನು ಹಲವು ಬಾರಿ ನೆಲಕ್ಕೆ ಬಡಿದು, ತುಳಿದಿದ್ದಾಳೆ. ಈ ವಿಡಿಯೊ ಸ್ಥಳೀಯ ನಿವಾಸಿಗಳು, ಪೋಷಕರು ಹಾಗೂ ಸಾಮಾಜಿಕ ಮಾಧ್ಯಮ ಬಳಕೆದಾರರಲ್ಲಿ ತೀವ್ರ ಕಳವಳವನ್ನುಂಟು ಮಾಡಿದೆ. ಈ ಹಲ್ಲೆ ಉದ್ದೇಶಪೂರ್ವಕವಾಗಿದ್ದು, ಆಕಸ್ಮಿಕವಾಗಿ ನಡೆದುದಲ್ಲ ಎಂದು ಪೋಷಕರು ಆರೋಪಿಸಿದ್ದಾರೆ. ಸಹಾಯಕಿ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಮಗುವಿನ ಹೆತ್ತವರು ಒತ್ತಾಯಿಸಿದರು. ಅಲ್ಲದೆ, ಚಿಕ್ಕ ಮಕ್ಕಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಶಾಲೆಯಲ್ಲಿ ಕಟ್ಟುನಿಟ್ಟಿನ ಮೇಲ್ವಿಚಾರಣೆ ಅಳವಡಿಸಬೇಕೆಂದು ಪಟ್ಟು ಹಿಡಿದರು.
