ಉದಯವಾಹಿನಿ, ರಾಂಚಿ: ದಕ್ಷಿಣ ಆಫ್ರಿಕಾ ವಿರುದ್ಧ ಭಾನುವಾರ ನಡೆದಿದ್ದ ಮೊದಲ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ತೋರುವ ಮೂಲಕ ಶತಕ ಬಾರಿಸಿ ಮಿಂಚಿದ್ದರು. ಈ ಮಧ್ಯೆ ಪಂದ್ಯದ ವೇಳೆ ಯುವ ಆಟಗಾರ ಯಶಸ್ವಿ ಜೈಸ್ವಾಲ್‌ಗೆ ಕಿಂಗ್ ಕೊಹ್ಲಿ ಕೀಟಲೆ ಮಾಡಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ತಮ್ಮ ಅಂತರರಾಷ್ಟ್ರೀಯ ವೃತ್ತಿಜೀವನದ ಕೊನೆಯ ಹಂತವನ್ನು ಆನಂದಿಸುತ್ತಿರುವಂತೆ ಕಾಣುತ್ತಿರುವ ಕೊಹ್ಲಿ, ಪಂದ್ಯ ಪ್ರಾರಂಭವಾಗುವ ಮೊದಲು ತಂಡಗಳು ರಾಷ್ಟ್ರಗೀತೆಗಾಗಿ ಸಾಲುಗಟ್ಟಿ ನಿಂತಿದ್ದಾಗ ಜೈಸ್ವಾಲ್ ಜತೆ ಸ್ವಲ್ಪ ಮೋಜು ಮಾಡಲು ಪ್ರಯತ್ನಿಸಿದರು.
ಜೈಸ್ವಾಲ್ ಅವರ ಕೇಶವಿನ್ಯಾಸವನ್ನು ‘ತೇರೆ ನಾಮ್’ ಚಿತ್ರದಲ್ಲಿ ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಅವರ ಕೇಶವಿನ್ಯಾಸದೊಂದಿಗೆ ಹೋಲಿಸಿದ ಕೊಹ್ಲಿ ಜೈಸ್ವಾಲ್ ಮುಂದೆ ‘ಲಗನ್ ಲಗಿ’ ನೃತ್ಯದಂತೆ ಹೆಜ್ಜೆ ಹಾಕಿದರು. ಕೊಹ್ಲಿ ಈ ನೃತ್ಯ ಕಂಡ ಜೈಸ್ವಾಲ್ ಸೇರಿ ಸಹ ಆಟಗಾರರು ನಗುವಿನ ಅಲೆಯಲ್ಲಿ ತೇಲಾಡಿದರು. ಪಂದ್ಯದಲ್ಲಿ ಭಾರತ ಟಾಸ್ ಸೋತು ಬ್ಯಾಟಿಂಗ್‌ಗೆ ಆಹ್ವಾನಿಸಲ್ಪಟ್ಟಿತು. ಕೊಹ್ಲಿ ಶತಕ, ರೋಹಿತ್ ಶರ್ಮಾ ಹಾಗೂ ರಾಹುಲ್ ತಲಾ ಅರ್ಧಶತಕದ ನೆರವಿನಿಂದ ಭಾರತ 8 ವಿಕೆಟ್‌ಗೆ 349 ರನ್ ಕಲೆಹಾಕಿತು. ಈ ಮೊತ್ತವನ್ನು ದ.ಆಫ್ರಿಕಾ ಬ್ಯಾಟರ್‌ಗಳು ಯಶಸ್ವಿಯಾಗಿ ಬೆನ್ನಟ್ಟದಿದ್ದರೂ ಸುಲಭದಲ್ಲಿ ಸೋಲೊಪ್ಪಲಿಲ್ಲ. ಉತ್ತಮ ಹೋರಾಟದ ಹೊರತಾಗಿಯೂ ತಂಡ 49.2 ಓವರ್‌ಗಳಲ್ಲಿ 332 ರನ್‌ಗೆ ಆಲೌಟಾಯಿತು.
