ಉದಯವಾಹಿನಿ, ಮೆಲ್ಬೋರ್ನ್: ಕಝಾಕಿಸ್ತಾನದ ಸ್ಟಾರ್ ಟೆನಿಸ್ ಆಟಗಾರ್ತಿ ಎಲೆನಾ ರೈಬಾಕಿನಾ ಅವರು ವಿಶ್ವದ ನಂ. 1 ಆಟಗಾರ್ತಿ ಅರಿನಾ ಸಬಲೆಂಕಾ ಅವರನ್ನು ರೋಚಕ ಫೈನಲ್‌ನಲ್ಲಿ ಸೋಲಿಸಿ 2026ರ ಆಸ್ಟ್ರೇಲಿಯನ್ ಓಪನ್ ಅನ್ನು ತನ್ನದಾಗಿಸಿಕೊಂಡರು. ಶನಿವಾರ ನಡೆದಿದ್ದ ಮಹಿಳೆಯರ ಸಿಂಗಲ್ಸ್‌ ಪಂದ್ಯದಲ್ಲಿ ರೈಬಾಕಿನಾ, ಸಬಲೆಂಕಾ ಅವರನ್ನು 6-4, 4-6, 6-4 ಸೆಟ್‌ಗಳಿಂದ ಸೋಲಿಸಿ ತಮ್ಮ ಎರಡನೇ ಗ್ರ್ಯಾಂಡ್ ಸ್ಲ್ಯಾಮ್ ಗೆದ್ದರು. 2023ರ ಫೈನಲ್‌ನಲ್ಲಿ ಅದೇ ಅಂಗಣದಲ್ಲಿ ಸಬಾಲೆಂಕಾ ವಿರುದ್ಧ ರೈಬಾಕಿನಾ ಅವರು ಸೋಲು ಅನುಭವಿಸಿದ್ದರು. ಇದೀಗ ಆ ಸೋಲಿನ ಸೇಡನ್ನು ತೀರಿಸಿಕೊಂಡರು.
ಪಂದ್ಯವು ಸಾಕಷ್ಟು ಏರಿಳಿತಗಳಿಂದ ಕೂಡಿತ್ತು. ಮೊದಲ ಸೆಟ್ ಅನ್ನು ಗೆಲ್ಲುವ ಮೂಲಕ ರೈಬಾಕಿನಾ ಉತ್ತಮ ಆರಂಭವನ್ನು ಪಡೆದಿದ್ದರು. ಆದರೆ ಸಬಲೆಂಕಾ ಎರಡನೇ ಸೆಟ್ ಅನ್ನು ಗೆದ್ದು ಪಂದ್ಯವನ್ನು ನಿರ್ಣಾಯಕ ಸೆಟ್‌ಗೆ ತಳ್ಳಿದರು. ಮೂರನೇ ಸೆಟ್‌ನಲ್ಲಿ ಒಂದು ಹಂತದಲ್ಲಿ ರೈಬಾಕಿನಾ 0-3 ಹಿನ್ನಡೆಯಲ್ಲಿದ್ದರು ಮತ್ತು ಸಬಾಲೆಂಕಾ ತಮ್ಮ ಸತತ ಮೂರನೇ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿಯನ್ನು ಗೆಲ್ಲುವ ಹಾದಿಯಲ್ಲಿದ್ದರು. ಆದಾಗ್ಯೂ, ಅಲ್ಲಿಂದ ರೈಬಾಕಿನಾ ಅಗಾಧವಾದ ಸಂಯಮವನ್ನು ತೋರಿಸಿದರು, ಸತತ ಐದು ಗೇಮ್‌ಗಳನ್ನು ಗೆದ್ದು ಪಂದ್ಯವನ್ನು ತಿರುಗಿಸಿದರು. ಅವರು ತಮ್ಮ ಮೊದಲ ಚಾಂಪಿಯನ್‌ಶಿಪ್ ಪಾಯಿಂಟ್‌ನಲ್ಲಿ ಅದ್ಭುತ ಏಸ್‌ನೊಂದಿಗೆ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡರು.

Leave a Reply

Your email address will not be published. Required fields are marked *

error: Content is protected !!