ಉದಯವಾಹಿನಿ, ದೆಹಲಿ: ಸಂಚಾರ್ ಸಾಥಿ ಆ್ಯಪ್ ಕಡ್ಡಾಯವಲ್ಲ. ಬಳಕೆದಾರರು ಯಾವುದೇ ಸಮಯದಲ್ಲಿ ಡಿಲೀಟ್‌ ಮಾಡಬಹುದು ಎಂದು ದೂರಸಂಪರ್ಕ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ. ಸಂಚಾರ್‌ ಸಾಥಿ ಅಪ್ಲಿಕೇಶನ್‌ ಮೂಲಕ ಜನರ ಮೇಲೆ ಬೇಹುಗಾರಿಕೆ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ ಎಂದು ವಿಪಕ್ಷಗಳು ಟೀಕಿಸಿದ ಬೆನ್ನಲ್ಲೇ ಅವರು ಸ್ಪಷ್ಟನೆ ನೀಡಿದರು. ಈ ಆ್ಯಪ್ ಸಂಪೂರ್ಣವಾಗಿ ಐಚ್ಛಿಕವಾಗಿದೆ. ನೀವು ಅದನ್ನು ಡಿಲೀಟ್‌ ಮಾಡಬೇಕಾದರೆ ಯಾವ ಸಮಯದಲ್ಲಿ ಬೇಕಾದರೂ ಡಿಲೀಟ್‌ ಮಾಡಬಹುದು. ಈ ಅಪ್ಲಿಕೇಶನ್ ಯಾವುದೇ ರೀತಿಯ ಕಣ್ಗಾವಲಿಗೆ ಅವಕಾಶ ನೀಡುವುದಿಲ್ಲ ಎಂದು ಅವರು ಹೇಳಿದರು.
ಗ್ರಾಹಕರಿಗೆ ಸಹಾಯ ಮಾಡುವುದು ಮತ್ತು ಅವರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವುದು ನಮ್ಮ ಕರ್ತವ್ಯ. ಸಂಚಾರ್ ಸಾಥಿ ಅಪ್ಲಿಕೇಶನ್ ಪ್ರತಿಯೊಬ್ಬ ಗ್ರಾಹಕರು ತಮ್ಮ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಸಂಚಾರ್ ಸಾಥಿಯಿಂದಾಗಿ ಸುಮಾರು 20 ಲಕ್ಷ ಕದ್ದ ಫೋನ್‌ಗಳನ್ನು ಪತ್ತೆಹಚ್ಚಲಾಗಿದೆ ಮತ್ತು ಸುಮಾರು 7.5 ಲಕ್ಷ ಕದ್ದ ಫೋನ್‌ಗಳನ್ನು ಅವುಗಳ ಮಾಲೀಕರಿಗೆ ಹಸ್ತಾಂತರಿಸಲಾಗಿದೆ. ಅದನ್ನು ಅವರ ಸಾಧನಗಳಲ್ಲಿ ಇನ್‌ಸ್ಟಾಲ್‌ ಮಾಡುವುದು ಅನ್‌ಇನ್‌ಸ್ಟಾಲ್‌ ಮಾಡುವುದು ಬಳಕೆದಾರರಿಗೆ ಬಿಟ್ಟ ವಿಚಾರ. ಇದನ್ನು ಯಾವುದೇ ಇತರ ಅಪ್ಲಿಕೇಶನ್‌ನಂತೆ ಮೊಬೈಲಿನಿಂದ ಅಳಿಸಬಹುದು ಎಂದರು.

Leave a Reply

Your email address will not be published. Required fields are marked *

error: Content is protected !!