ಉದಯವಾಹಿನಿ, ರಾಕಿಂಗ್ ಸ್ಟಾರ್ ಯಶ್ ಹಾಗೂ ರಾಧಿಕಾ ಪಂಡಿತ್ ದಂಪತಿಯ ಪುತ್ರಿ ಐರಾಗೆ ಹುಟ್ಟುಹಬ್ಬದ ಸಂಭ್ರಮ. ಏಳನೇ ವರ್ಷಕ್ಕೆ ಕಾಲಿಟ್ಟ ಪುಟಾಣಿ ಐರಾಗೆ ರಾಧಿಕಾ ಪಂಡಿತ್ ವಿಶೇಷವಾಗಿ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ಮಗಳು ಐರಾ ಶಿಶುವಾಗಿದ್ದಾಗ ಅಮ್ಮನ ಹಾಡಿನ ದನಿಗೂಡಿಸುವ ಮುದ್ದಾದ ವೀಡಿಯೋವನ್ನ ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ ರಾಧಿಕಾ ಪಂಡಿತ್.
ಅಮ್ಮ ರಾಧಿಕಾ ಪಂಡಿತ್ ಮಗಳಿಗೆ ಜೋಗುಳದ ರೂಪದಲ್ಲಿ ತಮ್ಮದೇ ಚಿತ್ರದ ಹಿಟ್ ಹಾಡನ್ನ ಹಾಡಿದ್ದಾರೆ. ಯಶ್ ಹಾಗೂ ರಾಧಿಕಾ ಜೋಡಿಯ ಹಿಟ್ ಹಾಡು `ಉಪವಾಸ ಈ ಕಣ್ಣಿಗೆ, ನೀ ಚೂರು ಮರೆಯಾದರೆ’ ಹಾಡನ್ನ ಹಾಡ್ತಾ ಮಗಳನ್ನ ತಟ್ಟಿದ್ದಾರೆ. ಅಮ್ಮನ ಹಾಡಿನ ದನಿಗೂಡಿಸಲು ಪ್ರಯತ್ನಿಸುವ ಪುಟ್ಟ ಐರಾ, ಹಾಡಿನ ರಾಗಕ್ಕೆ ತಕ್ಕಂತೆ ಗುನುಗುನಿಸಿದ್ದಾರೆ. ಈ ಮುದ್ದಾದ ವಿಡಿಯೋ ಶೇರ್ ಮಾಡಿರುವ ರಾಧಿಕಾ ಪಂಡಿತ್ “ನಮ್ಮ ಜೀವನದ ಮಾಧುರ್ಯಕ್ಕೆ 7ನೇ ವರ್ಷದ ಹುಟ್ಟುಹಬ್ಬದ ಸಂಭ್ರಮ” ಎಂದು ಬರೆದುಕೊಂಡಿದ್ದಾರೆ.
ಯಶ್ ರಾಧಿಕಾ ಮೊದಲನೇ ಪುತ್ರಿಯಾಗಿರುವ ಐರಾ 2018ರ ಡಿಸೆಂಬರ್ 2 ರಂದು ಜನಿಸಿದ್ದಾರೆ. ಇದೀಗ 7ನೇ ವರ್ಷಕ್ಕೆ ಕಾಲಿಟ್ಟಿರುವ ಐರಾ ಮನೆಗೆ ಎಲ್ಲರ ಪ್ರೀತಿ ಪಾತ್ರ ಮಗು. ಇನ್ನು ಯಶ್ ಕೆಲಸದ ನಡುವೆ ಎಷ್ಟೇ ಒತ್ತಡದಲ್ಲಿದ್ದರೂ ಮಕ್ಕಳ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಸೆಲೆಬ್ರೇಟ್ ಮಾಡೋದನ್ನ ಮಿಸ್ ಮಾಡುವುದಿಲ್ಲ. ಅದರಂತೆ ಈ ಬಾರಿ ಮಗಳ ಹುಟ್ಟುಹಬ್ಬವನ್ನ ಯಶ್ ಎಷ್ಟು ಅದ್ದೂರಿಯಾಗಿ ಆಚರಿಸಲಿದ್ದಾರೆ ಅನ್ನೋದನ್ನ ನೋಡುವ ಕುತೂಹಲ ಅಭಿಮಾನಿಗಳಲ್ಲಿ ಶುರುವಾಗಿದೆ. ಹೀಗೆ ಪ್ರೀತಿಪಾತ್ರ ಮುದ್ದು ಮಗಳನ್ನ ರಾಧಿಕಾ ನಮ್ಮ ಜೀವನದ ಮೆಲೋಡಿ ಎಂದು ಕರೆಯುವ ಮೂಲಕ ಜೀವನದ ಸಂತೋಷಕ್ಕೆ ಹೋಲಿಸಿದ್ದಾರೆ.
