ಉದಯವಾಹಿನಿ, ನಟ ಶ್ರೀನಗರ ಕಿಟ್ಟಿ ಮುಖ್ಯ ಭೂಮಿಕೆಯ ವೇಷಗಳು ಚಿತ್ರದ ಮುಹೂರ್ತ ಸಮಾರಂಭ ಮೈಸೂರು ರಸ್ತೆಯ ಕೆಂಗೇರಿ ಸಮೀಪದ ಜೆ.ಕೆ.ಗ್ರ್ಯಾಂಡ್ ಅರೇನಾ ಆವರಣದಲ್ಲಿ ಹಾಕಲಾಗಿರುವ ಬೃಹತ್ ಡ್ರಾಮಾ ಸ್ಟೇಜ್ ಸೆಟ್‌ನಲ್ಲಿ ನೆರವೇರಿತು. ಮುಹೂರ್ತ ದೃಶ್ಯಕ್ಕೆ ಡಿವೈಎಸ್‌ಪಿ ರಾಜೇಶ್ ಕ್ಲಾಪ್ ಮಾಡಿದರು. ಶಾಕುಂತಲಾ ದುಷ್ಯಂತ ಮಹಾರಾಜನ ನಾಟಕವೇ ಚಿತ್ರದ ಪ್ರಥಮ ದೃಶ್ಯ. ಗ್ರೀನ್ ಟ್ರೀ ಸ್ಟುಡಿಯೋಸ್ ಅಡಿಯಲ್ಲಿ ಕಿಶನ್ ರಾವ್ ದಳವಿ ಈ ಚಿತ್ರಕ್ಕೆ ಚಿತ್ರಕಥೆ, ಬರೆದು ನಿರ್ದೇಶನ ಮಾಡುತ್ತಿದ್ದಾರೆ. ವೃತ್ತಿಯಲ್ಲಿ ಟೀಚರ್ ಆದ ಸೌಜನ್ಯ ಚಿತ್ರದ ಸಂಭಾಷಣೆ ಬರೆದಿದ್ದಾರೆ. ಈ ಚಿತ್ರದಲ್ಲಿ ರಂಗಭೂಮಿ ಕಲಾವಿದರ ಅಲ್ಲದೆ ಜೋಗತಿಯರ ಜೀವನ ಶೈಲಿಯ ಬಗ್ಗೆಯೂ ಹೇಳಲಾಗುತ್ತಿದ್ದು, ಶ್ರೀನಗರ ಕಿಟ್ಟಿ ಅವರು ಬಸಪ್ಪ ಹಾಗೂ ಬಸಮ್ಮ ಜೋಗತಿಯಾಗಿ ಎರಡು ಗೆಟಪ್‌ಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಮುಹೂರ್ತದ ನಂತರ ನಡೆದ ಪತ್ರಿಕಾಗೋಷ್ಠಿಯಲ್ಲಿ ನಟ, ನಿರ್ಮಾಪಕ ಶ್ರೀನಗರ ಕಿಟ್ಟಿ, ನಾಯಕ ಭರತ್ ಬೋಪಣ್ಣ, ನಾಯಕಿ ಅಂಕಿತಾ ಅಮರ್, ಹಿರಿಯ ನಟ ಶರತ್ ಲೋಹಿತಾಶ್ವ, ತಬಲಾನಾಣಿ, ಸಂಗೀತ ನಿರ್ದೇಶಕ ಕೌಶಿಕ್ ಹರ್ಷ, ಸಾಹಿತಿ ಕವಿರಾಜ್, ಛಾಯಾಗ್ರಾಹಕ ಮನೋಹರ ಜೋಷಿ ಚಿತ್ರದ ಕುರಿತಂತೆ ಮಾತನಾಡಿದರು. ಮೊದಲಿಗೆ ನಿರ್ದೇಶಕ ಕಿಶನ್ ರಾವ್ ಮಾತನಾಡಿ, ಆರಂಭದಲ್ಲಿ ಒಂದಷ್ಟು ನಾಟಕ ಮಾಡಿ, ಅಸಿಸ್ಟೆಂಟ್ ಡೈರೆಕ್ಟರ್ ಆಗೂ ದುಡಿದೆ. ವೇಷಗಳು ಕಥೆ ಓದಿದಾಗ ಇದನ್ನು ಸಿನಿಮಾ ಮಾಡಿದರೆ ಚೆನ್ನಾಗಿರತ್ತೆ ಅನಿಸಿತು. ಭಾವನಾ ಬೆಳಗೆರೆ ಅವರಿಗೆ ಕೇಳಿದಾಗ ಅವರೂ ಒಪ್ಪಿದರು.
ಬಹುತೇಕ ರಂಗಸಜ್ಜಿಕೆಯೊಳಗೇ ನಡೆಯುವ, ನಾಟಕದ ಹಿನ್ನೆಲೆಯಲ್ಲಿ ಸಾಗುವ ಪ್ರೇಮಕಥೆಯಿದು. ಮಾಲೂರು ವಿಜಯ್ ಅವರು ಅದ್ಭುತವಾದ ಡ್ರಾಮಾ ಸೆಟ್‌ಗಳನ್ನು ಹಾಕಿಕೊಟ್ಟಿದ್ದಾರೆ. ಡಿಓಪಿ ಆಗಿ ಮನೋಹರ ಜೋಷಿ ಸಿಕ್ಕಮೇಲೆ ಬೇರೆಯದೇ ಎನರ್ಜಿ ಬಂತು. ಕವಿರಾಜ್, ನಾಗೇಂದ್ರ ಪ್ರಸಾದ್, ಕಲ್ಯಾಣ್, ವಿ.ಮನೋಹರ್ ಸಾಹಿತ್ಯ ಬರೆಯುತ್ತಿದ್ದಾರೆ. ಚಿತ್ರದಲ್ಲಿ 40 ರಿಂದ 50 ಭಾಗ ನಾಟಕದ ಎಪಿಸೋಡ್ ಬರುತ್ತದೆ. ಈ ಕಥೆ ಬಳ್ಳಾರಿಯಿಂದ ಶುರುವಾಗಿ ಉತ್ತರ ಕರ್ನಾಟಕ, ಬೆಂಗಳೂರು, ಮೈಸೂರು ಅಲ್ಲದೇ ಮಧ್ಯಪ್ರದೇಶದ ಮಹೇಶ್ವರದವರೆಗೂ ಸಾಗುತ್ತದೆ ಎಂದರು.
