ಉದಯವಾಹಿನಿ, ಕಾಮಿಡಿ ಶೋಗಳ ಮೂಲಕ ಪ್ರವರ್ಧಮಾನಕ್ಕೆ ಬಂದ ಗಿಲ್ಲಿ ನಟ , ಇದೀಗ ಬಿಗ್ ಬಾಸ್ ಶೋನಲ್ಲಿಯೂ ಸ್ಪರ್ಧಿಯಾಗಿ ಮಿಂಚುತ್ತಿದ್ದಾರೆ. ಅವರು ನಾಯಕನಾಗಿ ನಟಿಸಿರುವ `ಸೂಪರ್ ಹಿಟ್’ ಚಿತ್ರವೀಗ ಬಿಡುಗಡೆಗೆ ತಯಾರಾಗಿ ನಿಂತಿದೆ. ವಿಜಯಾನಂದ್ ನಿರ್ದೇಶನದ ಈ ಸಿನಿಮಾದ ಟೀಸರ್ ಇದೀಗ ಬಿಡುಗಡೆಗೊಂಡಿದೆ. ಈ ಕುರಿತಾದ ಪತ್ರಿಕಾಗೋಷ್ಠಿಯ ಮೂಲಕ ಚಿತ್ರತಂಡ ಒಟ್ಟಾರೆ ಸಿನಿಮಾದ ಬಗೆಗಿನ ಒಂದಷ್ಟು ಮಹತ್ವದ ವಿಚಾರಗಳನ್ನು ಹಂಚಿಕೊಂಡಿದೆ. ಹೀಗೆ ಬಿಡುಗಡೆಗೊಂಡಿರುವ `ಸೂಪರ್ ಹಿಟ್’ ಟೀಸರ್ ಸು ಫ್ರಂ ಸೋ ನಂತರದಲ್ಲಿ ಮತ್ತೊಂದು ಮಟ್ಟದ ಕಾಮಿಡಿಯ ಮೂಲಕ ಸಂಚಲನ ಸೃಷ್ಟಿಸುವ ಲಕ್ಷಣಗಳು ದಟ್ಟವಾಗಿ ಕಾಣಿಸುತ್ತಿವೆ.
ಸಿನಿಮಾವೊಂದು ಬಿಡುಗಡೆಯಾದ ನಂತರ ಸೂಪರ್ ಹಿಟ್ ಆಗೋದು ವಾಡಿಕೆ. ಆದರೆ, ಈ ಸಿನಿಮಾದ ಶೀರ್ಷಿಕೆಯೇ ಸೂಪರ್ ಹಿಟ್. ರನ್ನಿಂಗ್ ಸಕ್ಸಸ್‌ಫುಲಿ ಎಂಬ ಟ್ಯಾಗ್ ಲೈನ್ ಅದಕ್ಕಿದೆ. ಹೀಗೆ ಶೀರ್ಷಿಕೆಯ ಮೂಲಕವೇ ಗಮನ ಸೆಳೆದಿದ್ದ ಈ ಸಿನಿಮಾದ ಟೈಟಲ್ಲು ಹುಟ್ಟಿದ ಬಗೆಗಿನ ಇಂಟರೆಸ್ಟಿಂಗ್ ಸಂಗತಿಯನ್ನು ನಿರ್ದೇಶಕ ವಿಜಯಾನಂದ ಈ ಸಂದರ್ಭದಲ್ಲಿ ಹಂಚಿಕೊಂಡಿದ್ದಾರೆ. ಒಂದಷ್ಟು ಏಳುಬೀಳು ಕಂಡಿದ್ದ ಈ ಸಿನಿಮಾ ನಿರ್ಮಾಪಕರಾದ ಜಿ. ಉಮೇಶ್ ಅವರು ಸೂಪರ್ ಹಿಟ್ ಸಿನಿಮಾವನ್ನು ನಿರ್ಮಾಣ ಮಾಡೋ ಕನಸು ಹೊಂದಿದ್ದರಂತೆ. ಈ ವಿಚಾರವನ್ನು ಗಮನದಲ್ಲಿಟ್ಟುಕೊಂಡಿದ್ದ ನಿರ್ದೇಶಕರು, ಕಥೆಗೂ ಹೊಂದಿಕೆಯಾಗೋದರಿಂದ ಅದನ್ನೇ ಶೀರ್ಷಿಕೆಯಾಗಿಟ್ಟಿರೋದಾಗಿ ಮಾಹಿತಿ ಹಂಚಿಕೊಂಡರು.
