ಉದಯವಾಹಿನಿ, ಧಾರವಾಡ: ಸಾಕಷ್ಟು ಚರ್ಚೆಗೆ ಕಾರಣವಾಗಿದ್ದ ರುದ್ರಭೂಮಿ ಪ್ರಕರಣ ಕೊನೆಗೂ ಸುಖಾಂತ್ಯ ಕಂಡಿದೆ. ಕಳೆದೊಂದು ವಾರದಿಂದ ನಗರದಲ್ಲಿ ಸಾಕಷ್ಟು ವಿವಾದ ಸೃಷ್ಟಿಸಿ, ಕೊನೆಗೆ ಭೂಮಿಯ ಮಾಲಿಕ ಹಾಗೂ ಸ್ಥಳೀಯರ ನಡುವಿನ ತಿಕ್ಕಾಟಕ್ಕೂ ಕಾರಣವಾಗಿತ್ತು. ಅಲ್ಲದೇ ಜಿಲ್ಲಾಡಳಿತಕ್ಕೂ ತಲೆನೋವಾಗಿ ಪರಿಣಮಿಸಿತ್ತು. ಆದರೀಗ ಭೂಮಿಯ ಮಾಲೀಕನ ತ್ಯಾಗದಿಂದ ಜನ ನಿಟ್ಟುಸಿರು ಬಿಟ್ಟಿದ್ದಾರೆ. ಹೌದು. ಧಾರವಾಡ ನಗರದ ಕಮಲಾಪುರ ಬಡಾವಣೆಯಲ್ಲಿ ಬಳಿ ಇರೋ 78/2 ಸರ್ವೆ ನಂಬರ್‌ನ ಈ ಭೂಮಿ 4 ಎಕ್ರೆ 15 ಗುಂಟೆ ಇದೆ. ಈ ಜಮೀನಿನಲ್ಲಿಯೇ ಕಳೆದ 300 ವರ್ಷಗಳಿಂದ ಕಮಲಾಪುರ, ಮಾಳಾಪುರ, ನಾರಾಯಣಪೂರ, ಪತ್ರೇಶ್ವರ ನಗರ ಮತ್ತು ಮರಾಠಾ ಗಲ್ಲಿ ಜನರು ಮೃತರ ಅಂತ್ಯಕ್ರಿಯೆ ನೆರವೇರಿಸುತ್ತಾ ಬಂದಿದ್ದರು. ಈ ಜಮೀನು ಮಲ್ಲಿಕಾರ್ಜುನಯ್ಯ ಹಿರೇಮಠ ರಪಾಟಿ ಎನ್ನುವವರ ಹೆಸರಿನಲ್ಲಿತ್ತು. ಆದ್ರೆ ನೂರಾರು ವರ್ಷಗಳಿಂದ ಅಂತ್ಯ ಸಂಸ್ಕಾರ ನಡೆಸಿಕೊಂಡು ಬರುತ್ತಿದ್ದ ಕಾರಣ, ಸ್ಥಳೀಯರು ಆ ಭೂಮಿಯನ್ನ ರುದ್ರಭೂಮಿಯಾಗಿಯೇ ಮೀಸಲಿಡುವಂತೆ ಆಗ್ರಹಿಸುತ್ತಾ ಬಂದಿದ್ದರು. ಆದ್ರೆ ಭೂಮಾಲೀಕ ಈ ಜಾಗದಲ್ಲಿ ಲೇಔಟ್‌ ನಿರ್ಮಿಸಲು ಚಿಂತನೆ ನಡೆಸಿದ್ದರು. ಇದಕ್ಕೆ ಸ್ಥಳೀಯರಿಂದ ವಿರೋಧ ವ್ಯಕ್ತವಾಗಿತ್ತು, ಅಲ್ಲಿ ಲೇಔಟ್‌ ಆದ್ರೆ ಅಂತ್ಯಸಂಸ್ಕಾರಕ್ಕೆ ಸ್ಥಳವೇ ಇಲ್ಲದಂತಾಗುತ್ತದೆ ಎಂದು ಹೇಳಿದ್ದರು. ಈ ಕಾರಣಕ್ಕೆ ದೊಡ್ಡ ಹೋರಾಟವನ್ನೂ ಮಾಡಿದ್ದರು. ಆ ಭೂಮಿಗೆ ಒಂದು ಫಲಕ ಹಾಕಿ, ಅದರಲ್ಲಿ ಯಾರೂ ಇದನ್ನು ಖರೀದಿಸಬೇಡಿ ಅಂತಾ ಎಚ್ಚರಿಕೆ ಕೊಟ್ಟಿದ್ದರು. ಆದರೀಗ ಖುದ್ದು ಮಾಲೀಕರೇ ಈ ಭೂಮಿಯನ್ನ ರುದ್ರಭೂಮಿಗೆ ದಾನ ಮಾಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!