ಉದಯವಾಹಿನಿ, ನವದೆಹಲಿ: ರಾಯ್ಪುರದ ಶಾಹೀದ್ ವೀರ್ ನಾರಾಯಣ್ ಸಿಂಗ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಭಾರತ ಮತ್ತು ದಕ್ಷಿಣ ಆಫ್ರಿಕಾ  ನಡುವಣ ಎರಡನೇ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತು ಋತುರಾಜ್ ಗಾಯಕ್ವಾಡ್ ಅದ್ಭುತ ಶತಕಗಳನ್ನು ಗಳಿಸಿದರು. ಈ ಇಬ್ಬರು ಬ್ಯಾಟ್ಸ್‌ಮನ್‌ಗಳು ಮುರಿಯದ ನಾಲ್ಕನೇ ವಿಕೆಟ್‌ಗೆ 195 ರನ್‌ಗಳ ದೊಡ್ಡ ಜೊತೆಯಾಟವನ್ನು ಆಡಿದರು. ಈ ಅದ್ಭುತ ಜೊತೆಯಾಟದ ಮೂಲಕ ಕೊಹ್ಲಿ ಹಾಗೂ ಗಾಯಕ್ವಾಡ್‌ ಜೋಡಿ ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ಮತ್ತು ದಿನೇಶ್‌ ಕಾರ್ತಿಕ್‌ ಜೋಡಿಯ ಒಡಿಐ ಕ್ರಿಕೆಟ್‌ನಲ್ಲಿನ ವಿಶೇಷ ದಾಖಲೆಯನ್ನು ಮುರಿದಿದೆ.

ವಿರಾಟ್ ಕೊಹ್ಲಿ ಈ ಸರಣಿಯಲ್ಲಿ ತಮ್ಮ ಸತತ ಎರಡನೇ ಶತಕವನ್ನು ಗಳಿಸಿದರು. ಅವರು ಕೇವಲ 90 ಎಸೆತಗಳಲ್ಲಿ ತಮ್ಮ 53ನೇ ಏಕದಿನ ಶತಕ ಮತ್ತು ತಮ್ಮ ವೃತ್ತಿಜೀವನದ 84ನೇ ಅಂತಾರಾಷ್ಟ್ರೀಯ ಶತಕವನ್ನು ಪೂರ್ಣಗೊಳಿಸಿದರು. ರಾಂಚಿಯಲ್ಲಿ ನಡೆದಿದ್ದ ಮೊದಲನೇ ಪಂದ್ಯದಲ್ಲಿ ಅವರು ಗಳಿಸಿದ 135 ರನ್‌ಗಳ ನಂತರ, ಕೊಹ್ಲಿ ಅವರ ಪ್ರಭಾವಶಾಲಿ ಫಾರ್ಮ್ ಅವರು ಏಕದಿನ ಕ್ರಿಕೆಟ್‌ನಲ್ಲಿ ಶ್ರೇಷ್ಠ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು ಎಂದು ಸಾಬೀತುಪಡಿಸಿದೆ. ನಾಯಕ ಶುಭಮನ್ ಗಿಲ್ ಮತ್ತು ಉಪನಾಯಕ ಶ್ರೇಯಸ್ ಅಯ್ಯರ್ ಗಾಯಗಳಿಂದಾಗಿ ಏಕದಿನ ತಂಡಕ್ಕೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಋತುರಾಜ್ ಗಾಯಕ್ವಾಡ್ ಅವರನ್ನು ಕರೆಸಲಾಯಿತು. ಅವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡರು. ಅವರು 77 ಎಸೆತಗಳಲ್ಲಿ ತಮ್ಮ ಚೊಚ್ಚಲ ಏಕದಿನ ಶತಕವನ್ನು ಪೂರ್ಣಗೊಳಿಸಿದರು. 52 ಎಸೆತಗಳಲ್ಲಿ ಅರ್ಧಶತಕವನ್ನು ತಲುಪಿದ ನಂತರ, ಕೇಶವ್ ಮಹಾರಾಜ್ ಎಸೆದ ಓವರ್‌ನಲ್ಲಿ 16 ರನ್ ಗಳಿಸಿ ಆತ್ಮವಿಶ್ವಾಸದ ಹೆಚ್ಚಿಸಿಕೊಂಡರು.

358 ರನ್‌ ಕಲೆ ಹಾಕಿದ ಭಾರತ: ಈ ಪಂದ್ಯದಲ್ಲಿ ಟಾಸ್‌ ಸೋತು ಮೊದಲು ಬ್ಯಾಟ್‌ ಮಾಡುವಂತಾದ ಭಾರತ ತಂಡ, ತನ್ನ ಪಾಲಿನ 50 ಓವರ್‌ಗಳಿಗೆ 5 ವಿಕೆಟ್‌ಗಳ ನಷ್ಟಕ್ಕೆ 358 ರನ್‌ಗಳನ್ನು ಕಲೆ ಹಾಕಿತು. ಆ ಮೂಲಕ ಎದುರಾಳಿ ದಕ್ಷಿಣ ಆಫ್ರಿಕಾ ತಂಡಕ್ಕೆ 359 ರನ್‌ಗಳ ಗುರಿಯನ್ನು ನೀಡಿತು. ಋತುರಾಜ್‌ ಗಾಯಕ್ವಾಡ್‌ 105 ರನ್‌, ವಿರಾಟ್‌ ಕೊಹ್ಲಿ 102 ರನ್‌ಗಳನ್ನು ಕಲೆ ಹಾಕಿದರು. ಇವರ ಜೊತೆಗೆ ಕೆಎಲ್‌ ರಾಹುಲ್‌ ಅವರು 43 ಎಸೆತಗಳಲ್ಲಿ ಅಜೇಯ 66 ರನ್‌ಗಳನ್ನು ಗಳಿಸಿದರು.

 

Leave a Reply

Your email address will not be published. Required fields are marked *

error: Content is protected !!