ಉದಯವಾಹಿನಿ, ರಾಯ್ಪುರ: ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ಏಕದಿನ ಪಂದ್ಯದಲ್ಲಿ ಭಾರತ ತಂಡದ ಯುವ ಬ್ಯಾಟ್ಸ್‌ಮನ್‌ ಋತುರಾಜ್‌ ಗಾಯಕ್ವಾಡ್‌ ) ಭರ್ಜರಿ ಬ್ಯಾಟಿಂಗ್‌ ಪ್ರದರ್ಶನವನ್ನು ತೋರಿದ್ದಾರೆ. ಆ ಮೂಲಕ ಅವರು ತಮ್ಮ ಒಡಿಐ ವೃತ್ತಿ ಜೀವನದಲ್ಲಿ ಚೊಚ್ಚಲ ಶತಕವನ್ನು ಪೂರ್ಣಗೊಳಿಸಿದ್ದಾರೆ. ಮೊದಲನೇ ಏಕದಿನ ಪಂದ್ಯದಲ್ಲಿ ವೈಫಲ್ಯ ಅನುಭವಿಸಿದ ಗಾಯಕ್ವಾಡ್‌, ಎರಡನೇ ಪಂದ್ಯದಲ್ಲಿ ತನ್ನ ತಪ್ಪನ್ನು ತಿದ್ದಿಕೊಂಡು ಶ್ರೇಷ್ಠ ಇನಿಂಗ್ಸ್‌ ಆಡಿದರು. ಆ ಮೂಲಕ ಗಾಯಾಳು ಶ್ರೇಯಸ್‌ ಅಯ್ಯರ್‌ ಅವರ ಸ್ಥಾನದಲ್ಲಿ ಸಿಕ್ಕಿದ ಅವಕಾಶವನ್ನು ಸಂಪೂರ್ಣವಾಗಿ ಸದುಪಯೋಗಪಡಿಸಿಕೊಂಡರು.

ರಾಂಚಿಯಲ್ಲಿ ನಡೆದಿದ್ದ ಮೊದಲನೇ ಒಡಿಐ ಪಂದ್ಯದಲ್ಲಿ ಋತುರಾಜ್‌ ಗಾಯಕ್ವಾಡ್‌ ಅವರು 14 ಎಸೆತಗಳಲ್ಲಿ ಕೇವಲ 8 ರನ್ ಗಳಿಸುವ ಮೂಲಕ ವಿಫಲರಾಗಿದ್ದರು. ಈ ಕಳಪೆ ಪ್ರದರ್ಶನವು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಟೀಕೆಗಳಿಗೆ ಕಾರಣವಾಗಿತ್ತು. ಆದಾಗ್ಯೂ, ಈ ಎಲ್ಲಾ ಟೀಕೆಗಳನ್ನು ಋತುರಾಜ್ ಗಾಯಕ್ವಾಡ್‌ ನಿರ್ಲಕ್ಷಿಸಿ ಎರಡನೇ ಒಡಿಐ ಪಂದ್ಯದಲ್ಲಿ ಗಮನಾರ್ಹವಾಗಿ ಕಮ್‌ಬ್ಯಾಕ್‌ ಮಾಡಿದರು. ಅವರು ಐತಿಹಾಸಿಕ ಇನಿಂಗ್ಸ್‌ ಆಡಿದರು. ದಕ್ಷಿಣ ಆಫ್ರಿಕಾದ ಬಲಿಷ್ಠ ಬೌಲಿಂಗ್ ದಾಳಿಯ ವಿರುದ್ಧ ಸಂಯಮ ಮತ್ತು ಆಕ್ರಮಣಶೀಲತೆಯ ಪರಿಪೂರ್ಣ ಮಿಶ್ರಣವನ್ನು ಅವರು ಪ್ರದರ್ಶಿಸಿದರು, ಮತ್ತೊಮ್ಮೆ ತಮ್ಮನ್ನು ತಾವು ಸಾಬೀತುಪಡಿಸಿದರು.

ತಮ್ಮ ಒಡಿಐ ವೃತ್ತಿ ಜೀವನದ ಮೊದಲ ಶತಕ : ಭಾರತ ತಂಡದ ಸ್ಟಾರ್ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ಬೇಗನೆ ಔಟಾದರು. ನಂತರ ಯಶಸ್ವಿ ಜೈಸ್ವಾಲ್‌ ಕೂಡ ತಾಳ್ಮೆ ಕಳೆದುಕೊಂಡು ವಿಕೆಟ್‌ ಒಪ್ಪಿಸಿದರು. ನಾಲ್ಕನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದ ಋತುರಾಜ್‌ ಗಾಯಕ್ವಾಡ್‌, ಆಧುನಿಕ ದಿಗ್ಗಜ ವಿರಾಟ್ ಕೊಹ್ಲಿ ಅವರೊಂದಿಗೆ 195 ರನ್‌ಗಳ ದೊಡ್ಡ ಜೊತೆಯಾಟವನ್ನು ಆಡಿದರು. ವಿರಾಟ್‌ ಕೊಹ್ಲಿ ಜೊತೆ ಮತ್ತೊಂದು ತುದಿಯಲ್ಲಿ ಬ್ಯಾಟ್‌ ಮಾಡಿದ ಋತುರಾಜ್‌ ಗಾಯಕ್ವಾಡ್‌, 77 ಎಸೆತಗಳಲ್ಲಿಯೇ ಶತಕವನ್ನು ಬಾರಿಸಿದರು. ಆ ಮೂಲಕ ತಮ್ಮ ಒಡಿಐ ವೃತ್ತಿ ಜೀವನದಲ್ಲಿ ಚೊಚ್ಚಲ ಶತಕವನ್ನು ಪೂರ್ಣಗೊಳಿಸಿದರು.

Leave a Reply

Your email address will not be published. Required fields are marked *

error: Content is protected !!