ಉದಯವಾಹಿನಿ, ತಮಿಳುನಾಡು: ಮಧುರೈ ದೇವಸ್ಥಾನದ ವತಿಯಿಂದ ತಿರುಪರಂಕುಂದ್ರಂ ಬೆಟ್ಟದ ತುದಿಯಲ್ಲಿ ಪವಿತ್ರ ದೀಪ ಬೆಳಗುವ ಬಗ್ಗೆ ಗಲಾಟೆ ನಡೆದಿದೆ. ದೀಪ ಬೆಳಗುವ ವಿಚಾರಕ್ಕೆ ಸಂಬಂಧಿಸಿ ಪೊಲೀಸರೊಂದಿಗೆ ಬಲಪಂಥೀಯ ಕಾರ್ಯಕರ್ತರು ಘರ್ಷಣೆಗೆ ಇಳಿದ ಕಾರಣ ದೀಪವನ್ನು ಅದರ ಸಾಂಪ್ರದಾಯಿಕ ಸ್ಥಳದಲ್ಲೇ ಬೆಳಗಿಸಲಾಯಿತು. ಇದರಿಂದ ವಿವಾದ ಕೊನೆಗೊಂಡರೂ ಕೂಡ ವಿವಾದಿತ ಬೆಟ್ಟದ ತುದಿಯಲ್ಲಿರುವ ದೇವಸ್ಥಾನದಲ್ಲಿಯೇ ದೀಪ ಬೆಳಗಿಸಬೇಕೆಂದು ನಿರ್ದೇಶಿಸಿದ್ದ ಮದ್ರಾಸ್ ಹೈಕೋರ್ಟ್‌ನ ಆದೇಶ ಉಲ್ಲಂಘನೆಯಾದಂತಾಗಿದೆ. ಈ ಬಗ್ಗೆ ಮುಂದೆ ಯಾವ ರೀತಿಯ ಕ್ರಮ ಕೈಗೊಳ್ಳಲಾಗುವುದು ಎಂಬುದನ್ನು ಕಾದು ನೋಡಬೇಕು.ತಿರುಪರಂಕುಂದ್ರಂ ಬೆಟ್ಟದ ತುದಿಯಲ್ಲಿರುವ ದೇವಸ್ಥಾನದಲ್ಲಿ ಕಾರ್ತಿಗೈ ದೀಪಂ ಬೆಳಗಿಸಬೇಕು ಎಂದು ಮದ್ರಾಸ್ ಹೈಕೋರ್ಟ್ ಆದೇಶಿಸಿದ್ದು, ಇದನ್ನು ಖಚಿತಪಡಿಸಿಕೊಳ್ಳುವಂತೆ ರಾಜ್ಯ ಅಧಿಕಾರಿಗಳಿಗೆ ನಿರ್ದೇಶನ ನೀಡಲಾಗಿತ್ತು. ಕಾರ್ತಿಗೈ ದೀಪಂ ಎನ್ನುವುದು ಕತ್ತಲೆಯ ಮೇಲೆ ಬೆಳಕಿನ ವಿಜಯವನ್ನು ಆಚರಿಸುವ ಹಿಂದೂ ಹಬ್ಬವಾಗಿದೆ.
ನಂಬಿಕೆ ಮತ್ತು ಶಾಂತಿಯ ತಾಣ ಎಂದೇ ಖ್ಯಾತಿ ಪಡೆದಿರುವ ತಿರುಪರಂಕುಂದ್ರಂ ಬೆಟ್ಟದಲ್ಲಿ ಐತಿಹಾಸಿಕ ಸುಬ್ರಮಣ್ಯ ಸ್ವಾಮಿ ದೇವಸ್ಥಾನ, ಕಾಶಿ ವಿಶ್ವನಾಥರ್ ದೇವಸ್ಥಾನ ಮತ್ತು ಸಿಕ್ಕಂದರ್ ಬಾದುಷಾ ದರ್ಗಾಗಳಿವೆ. ಇಲ್ಲಿ ದೀಪ ಬೆಳಗುವ ವಿಚಾರಕ್ಕೆ ಸಂಬಂಧಿಸಿ ವಾರದ ಆರಂಭದಲ್ಲಿ ಕಾರ್ಯಕರ್ತರೊಬ್ಬರು ಅರ್ಜಿ ,ಮದ್ರಾಸ್ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ.ಆರ್. ಸ್ವಾಮಿನಾಥನ್ ಅವರು ಬೆಟ್ಟದ ತುದಿಯಲ್ಲಿ ಪವಿತ್ರ ದೀಪವನ್ನು ಬೆಳಗಿಸುವಂತೆ ರಾಜ್ಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು. ಮಧುರೈ ಪೀಠವು ಅರ್ಜಿದಾರರು ಮತ್ತು ಇತರ ಹತ್ತು ಜನರು ಸೇರಿ ತಿರುಪ್ಪರಂಕುಂದ್ರಂ ಬೆಟ್ಟದ ತುದಿಯಲ್ಲಿರುವ ದೀಪ ಸ್ತಂಭದಲ್ಲಿ ಕಾರ್ತಿಗೈ ದೀಪವನ್ನು ಬೆಳಗಿಸಲು ಹೈಕೋರ್ಟ್ ಅವಕಾಶ ನೀಡುವಂತೆ ಆದೇಶಿಸಿತ್ತು. ಇತ್ತೀಚಿನ ಹಲವು ವರ್ಷಗಳಿಂದ ಹತ್ತಿರದ ದೀಪ ಮಂಟಪದಲ್ಲೇ ದೀಪವನ್ನು ಬೆಳಗಿಸಲಾಗುತ್ತಿತ್ತು.
