ಉದಯವಾಹಿನಿ, ಮುಂಬೈ : ಮುಂಬೈಯ ವ್ಯಕ್ತಿಯೊಬ್ಬ ಹೊಸ ಮನೆ ಖರೀದಿಸಿ ತನ್ನ ಹೆತ್ತವರನ್ನು ಅಚ್ಚರಿಗೊಳಿಸಿದ ಹೃದಯಸ್ಪರ್ಶಿ ವಿಡಿಯೊವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ನೆಟ್ಟಿಗರನ್ನು ಮಂತ್ರಮುಗ್ಧಗೊಳಿಸಿದೆ. ವ್ಯಾಪಕವಾಗಿ ಹಂಚಿಕೊಳ್ಳಲಾದ ಈ ವಿಡಿಯೊದಲ್ಲಿ, ದಂಪತಿಯನ್ನು ಅವರ ಪುತ್ರ ಬಾಡಿಗೆ ಅಪಾರ್ಟ್‌ಮೆಂಟ್ ಎಂದು ಹೇಳಿ ಮನೆಯೊಂದಕ್ಕೆ ಕರೆದುಕೊಂಡು ಹೋಗಿದ್ದಾನೆ. ಬಳಿಕ ಆ ಮನೆಯನ್ನು ಖರೀದಿಸಿದ್ದಾಗಿ ಹೇಳಿ ಹೆತ್ತವರಿಗೆ ಸರ್‌ಪ್ರೈಸ್ ನೀಡಿದ್ದಾನೆ. ಆಶಿಶ್ ಜೈನ್ ಎಂಬಾತ ಹೆತ್ತವರಿಗೆ ಈ ರೀತಿ ಸರ್‌ಪ್ರೈಸ್ ನೀಡಿದ್ದು, ಆಸ್ತಿ ದಾಖಲೆಗಳು ಮತ್ತು ಅವರ ಹೆಸರು ಹೊಂದಿರುವ ನಾಮಫಲಕವನ್ನು ಹಸ್ತಾಂತರಿಸಿದ್ದಾನೆ. ಈ ಅಪರೂಪದ ಕ್ಷಣ ವಿಡಿಯೊದಲ್ಲಿ ಸೆರೆಯಾಗಿದೆ.
ವಿಡಿಯೊದ ಆರಂಭದಲ್ಲಿ ಜೈನ್ ತನ್ನ ಹೆತ್ತವರೊಂದಿಗೆ ಹೊಸದಾಗಿ ನಿರ್ಮಿಸಲಾದ ಸುಸಜ್ಜಿತ ಫ್ಲ್ಯಾಟ್ ಒಳಗೆ ನಿಂತಿರುವುದು ಕಂಡು ಬಂದಿದೆ. ಆತನ ತಂದೆ ಮತ್ತು ತಾಯಿ ತಾವು ಹೊಸ ಬಾಡಿಗೆ ಮನೆಗೆ ಬಂದಿದ್ದೇವೆ ಎಂದು ನೋಡುತ್ತ ನಿಂತಿದ್ದರು. ಇದು ಮತ್ತೊಂದು ಬಾಡಿಗೆ ಮನೆ ಎಂದುಕೊಂಡಿದ್ದರು. ಈ ವೇಳೆ ಆಶಿಶ್ ಜೈನ್ ಆಸ್ತಿ ದಾಖಲೆಗಳನ್ನು ತನ್ನ ಪೋಷಕರ ಕೈಗೆ ಇಡುತ್ತ, ನಿಮಗಾಗಿ ಮನೆಯನ್ನು ಖರೀದಿಸಿದ್ದೇನೆ. ಪತ್ರ ಮತ್ತು ಮುಖ್ಯ ದ್ವಾರದ ನಾಮಫಲಕದಲ್ಲಿರುವ ಹೆಸರು ನಿಮಗೆ ಸೇರಿವೆ ಎಂದು ಅವರಿಗೆ ಹೇಳಿದ್ದಾನೆ. ಈ ವೇಳೆ ಪೋಷಕರು ಒಂದು ಕ್ಷಣ ಅವಕ್ಕಾಗಿ ಆನಂದಭಾಷ್ಪ ಸುರಿಸಿದ್ದಾರೆ.
