ಉದಯವಾಹಿನಿ, ಚಂಡೀಗಢ : ತನಗಿಂತ ಸುಂದರವಾಗಿ ಯಾರೂ ಇರಬಾರದು ಎಂದು ಮಹಿಳೆಯೊಬ್ಬಳು ತನ್ನ ಮಗ ಹಾಗೂ ಮೂವರು ಬಾಲಕಿಯರನ್ನು ಹತ್ಯೆ ಮಾಡಿರುವ ಆಘಾತಕಾರಿ ಘಟನೆ ಹರಿಯಾಣದ ಪಾಣಿಪತ್ ಜಿಲ್ಲೆಯಲ್ಲಿ ನಡೆದಿದೆ. ಆರೋಪಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ. ವಿಧಿ ಎಂಬ ಬಾಲಕಿಯನ್ನು ಹತ್ಯೆಯ ನಂತರ ಆಕೆಯ ಪುತ್ರ ಹಾಗೂ ಇಬ್ಬರು ಬಾಲಕಿಯರ ಕೊಲೆಯ ರಹಸ್ಯ ಬೆಳಕಿಗೆ ಬಂದಿದೆ.
ಮಹಿಳೆಯನ್ನು ಪೂನಂ ಎಂದು ಗುರುತಿಸಲಾಗಿದೆ. ತನಗಿಂತ ಸುಂದರವಾಗಿ ಯಾರೂ ಇರಬಾರದು ಎಂಬ ಕಾರಣಕ್ಕಾಗಿ ಮೂವರು ಹುಡುಗಿಯರನ್ನು ಕೊಂದಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾಳೆ. ಸುಂದರ ಹುಡುಗಿಯರು ತನ್ನ ಗುರಿಯಾಗಿದ್ದರು. ಆದರೆ ಅನುಮಾನ ಬರದಂತೆ ತನ್ನ ಸ್ವಂತ ಮಗನನ್ನೂ ಕೊಂದಿದ್ದಾಗಿ ಮಹಿಳೆ ಹೇಳಿದ್ದಾಳೆ.
ಸೋನಿಪತ್‌ನಲ್ಲಿ ವಾಸಿಸುತ್ತಿದ್ದ ಬಾಲಕಿ ವಿಧಿ, ತನ್ನ ಕುಟುಂಬದೊಂದಿಗೆ ಸಂಬಂಧಿಕರ ಮದುವೆಯಲ್ಲಿ ಪಾಲ್ಗೊಳ್ಳಲು ಇಸ್ರಾನಾ ಪ್ರದೇಶದ ನೌಲ್ತಾ ಗ್ರಾಮಕ್ಕೆ ಬಂದಿದ್ದಳು. ಆಕೆಯ ಅಜ್ಜ ಪಾಲ್ ಸಿಂಗ್, ಅಜ್ಜಿ ಓಂವತಿ, ತಂದೆ ಸಂದೀಪ್, ತಾಯಿ ಮತ್ತು 10 ತಿಂಗಳ ಕಿರಿಯ ಸಹೋದರ ಅವಳೊಂದಿಗೆ ಇದ್ದರು. ಸೋಮವಾರ (ಡಿಸೆಂಬರ್ 1) ಮಧ್ಯಾಹ್ನ ನೌಲ್ತಾದಲ್ಲಿ ಮದುವೆ ಮೆರವಣಿಗೆಯೊಂದಿಗೆ ಕುಟುಂಬ ಹೊರಟ ಬಳಿಕ ವಿಧಿ ನಾಪತ್ತೆಯಾಗಿದ್ದಳು. ಬಲಿಕ ಎಲ್ಲರೂ ಸೇರಿ ಆಕೆಗಾಗಿ ಹುಡುಕಾಟ ತೊಡಗಿದರು. ಒಂದು ಗಂಟೆಯ ನಂತರ ಆಕೆಯ ಅಜ್ಜಿ ತಮ್ಮ ಸಂಬಂಧಿಕರ ಮನೆಯ ಮೊದಲ ಮಹಡಿಯಲ್ಲಿರುವ ಕೋಣೆಗೆ ಹೊರಗಿನಿಂದ ಚಿಲಕ ಹಾಕಿರುವುದನ್ನು ಗಮನಿಸಿದರು. ಅದನ್ನು ತೆರೆದಾಗ ವಿಧಿ ಒಳಗೆ ಇರುವುದು ಕಂಡು ಬಂದಿತು.
ಕೂಡಲೇ ಆಕೆಯನ್ನು ಎನ್‌ಸಿ ವೈದ್ಯಕೀಯ ಕಾಲೇಜಿಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ಆಕೆ ಮೃತಪಟ್ಟಿದ್ದಾಳೆಂದು ಘೋಷಿಸಿದರು. ವಿಧಿಯ ತಂದೆ ಕೊಲೆ ಮಾಡಲಾಗಿದೆ ಎಂದು ಆರೋಪಿಸಿ ದೂರು ದಾಖಲಿಸಿದರು. ಪಾಣಿಪತ್ ಪೊಲೀಸ್ ವರಿಷ್ಠಾಧಿಕಾರಿ ಭೂಪೇಂದ್ರ ಸಿಂಗ್ ನೇತೃತ್ವದಲ್ಲಿ ಪೊಲೀಸರು ತನಿಖೆ ನಡೆದಾಗ ಇದರ ಹಿಂದೆ ಪೂನಂ ಕೈವಾಡ ಇರುವುದು ಬೆಳಕಿಗೆ ಬಂದಿದೆ. ತನಿಖೆ ವೇಳೆ ಆಕೆ ತಪ್ಪೊಪ್ಪಿಕೊಂಡಿದ್ದಾಳೆ.
