ಉದಯವಾಹಿನಿ, ಹೈದರಾಬಾದ್: ಆಂಧ್ರಪ್ರದೇಶದ ಮಹಿಳೆಯರಿಗೆ ಉಚಿತ ಪ್ರಯಾಣ ವ್ಯವಸ್ಥೆ ಕಲ್ಪಿಸಿರುವ ಸ್ತ್ರೀ ಶಕ್ತಿ ( ಯೋಜನೆ ಎಲೆಕ್ಟ್ರಿಕ್ ಬಸ್‌ಗಳಿಗೂ ವಿಸ್ತರಣೆಗೊಂಡಿದೆ. ಈವರೆಗೆ ಎಲೆಕ್ಟ್ರಿಕ್ ಬಸ್‌ಗಳು ಮತ್ತು ಅಂತಾರಾಜ್ಯ ಬಸ್‌ಗಳನ್ನು ಹೊರತುಪಡಿಸಿ ಉಳಿದ ಸರ್ಕಾರಿ ಬಸ್‌ಗಳಿಗೆ ಮಾತ್ರ ಈ ಯೋಜನೆಯನ್ನು ಸೀಮಿತಗೊಳಿಸಲಾಗಿತ್ತು. ಆದರೆ, ಇದೀಗ ಆಂಧ್ರಪ್ರದೇಶದ ಮುಖ್ಯಮಂತ್ರಿ ನಾರಾ ಚಂದ್ರಬಾಬು ನಾಯ್ಡು ಅವರು ಶುದ್ಧ ಇಂಧನವನ್ನು ಉತ್ತೇಜಿಸುವುದರ ಜೊತೆಗೆ ರಾಜ್ಯದ ಸಾರಿಗೆ ವ್ಯವಸ್ಥೆಯನ್ನು ಆಧುನೀಕರಿಸುವ ನಿಟ್ಟಿನಲ್ಲಿ ಈ ಮಹತ್ವದ ನಿರ್ಧಾರವನ್ನು ಕೈಗೊಂಡಿದ್ದಾರೆ.
ಪರಿಸರ ಸ್ನೇಹಿ ಸಾರಿಗೆ ಸೇವೆಯನ್ನು ಪ್ರೋತ್ಸಾಹಿಸುವ ಮತ್ತು ಮಹಿಳಾ ಪ್ರಯಾಣಿಕರಿಗೆ ಸೌಲಭ್ಯಗಳನ್ನು ಹೆಚ್ಚಿಸಲು ಸರ್ಕಾರ ಈ ಯೋಜನೆಯನ್ನು ಘೋಷಿಸಿದೆ. ಡಿಸೆಂಬರ್ 2ರಂದು ನಡೆದ ವಿದ್ಯುತ್ ಪರಿಶೀಲನಾ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಈ ಕುರಿತು ಮಾಹಿತಿ ಹಂಚಿಕೊಂಡಿರುವ ಆಂಧ್ರಪ್ರದೇಶದ ಮುಖ್ಯಮಂತ್ರಿ ನಾರಾಚಂದ್ರಬಾಬು ನಾಯ್ಡು, ಎಪಿಎಸ್‌ಆರ್‌ಟಿ ಸೇವೆಗಳನ್ನು ಆಧುನಿಕರಿಸಲು ಸರ್ಕಾರ ದೊಡ್ಡ ಪ್ರಮಾಣದ ವಿದ್ಯುತ್ ಚಾಲಿತ ಬಸ್‌ಗಳನ್ನು ಖರೀದಿಸಿದೆ.
ಶೀಘ್ರದಲ್ಲೇ 1000ಕ್ಕೂ ಹೆಚ್ಚು ಹೊಸ ಎಲೆಕ್ಟ್ರಿಕ್ ಬಸ್‌ಗಳು ಸೇವೆ ಆರಂಭಿಸಲಿವೆ. 1050 ಬಸ್‌ಗಳ ಖರೀದಿ ಈಗಾಗಲೇ ಪೂರ್ಣಗೊಂಡಿದ್ದು, ಬಸ್‌ಗಳನ್ನು ವಿವಿಧ ನಗರಗಳು ಮತ್ತು ಜಿಲ್ಲಾ ಕೇಂದ್ರಗಳ ಡಿಪೋಗಳಲ್ಲಿ ನಿಯೋಜಿಸಲಾಗುತ್ತಿದೆ. ಇನ್ನು ಮುಂದೆ ಸಾರಿಗೆ ಇಲಾಖೆಯಲ್ಲಿ ಖರೀದಿ ಮಾಡುವ ಎಲ್ಲಾ ಬಸ್‌ಗಳು ಎಲೆಕ್ಟ್ರಿಕ್ ಬಸ್‌ಗಳಾಗಿರುತ್ತವೆ. ವಾಹನಗಳಿಂದ ಉಂಟಾಗುವ ವಾಯುಮಾಲಿನ್ಯವನ್ನು ಕಡಿಮೆ ಮಾಡಲು ಇದು ಪ್ರಮುಖ ಹೆಜ್ಜೆಯಾಗಿದೆ. ರಾಜ್ಯದಲ್ಲಿ ವಿದ್ಯುತ್ ಕ್ಷೇತ್ರದಲ್ಲಿ ಸುಧಾರಣೆಗೆ ಕ್ರಮ ವಹಿಸಿದ್ದು, ರಾಜ್ಯದ ವಿದ್ಯುತ್ ಇಲಾಖೆ ಬೇಡಿಕೆಗೆ ಅನುಗುಣವಾಗಿ ಗುಣಮಟ್ಟದ ವಿದ್ಯುತ್ ಪೂರೈಸುತ್ತಿದೆ. ಕೈಗಾರಿಕೆಗಳಿಗೆ ವಿದ್ಯುತ್ ಸಬ್ಸಿಡಿಗಳನ್ನು ಇನ್ನು ಒಂದು ವರ್ಷ ಮುಂದುವರೆಸಲಾಗುವುದು ಎಂದು ಹೇಳಿದ್ದಾರೆ.
ವಿದ್ಯುತ್ ಚಾಲಿತ ಬಸ್‌ಗಳಲ್ಲಿ ಉಚಿತ ಪ್ರಯಾಣ: ಈ ಯೋಜನೆಯ ಫಲಾನುಭವಿಗಳು ಈಗಾಗಲೇ ಗುರುತಿನ ಚೀಟಿ ತೋರಿಸುವ ಮೂಲಕ ಎಲೆಕ್ಟ್ರಿಕ್ ಬಸ್‌ಗಳಲ್ಲೂ ಉಚಿತವಾಗಿ ಪ್ರಯಾಣಿ ಆರಂಭಿಸಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಮತ್ತು ವಿದ್ಯಾರ್ಥಿನಿಯರಿಗೆ ಇದರಿಂದ ಹೆಚ್ಚು ಅನುಕೂಲವಾಗುತ್ತದೆ ಹಾಗೂ ಶಬ್ದ ಮತ್ತು ವಾಯುಮಾಲಿನ್ಯ ಕಡಿಮೆ ಮಾಡಲು, ಪ್ರಯಾಣಿಕರ ಸೌಕರ್ಯಗಳನ್ನು ಹೆಚ್ಚಿಸಲು ಈ ಯೋಜನೆ ಸಹಕರಿಸಲಿದೆ. ಮುಂಬರುವ ತಿಂಗಳುಗಳಲ್ಲಿ ಆಂಧ್ರಪ್ರದೇಶದ ಸಾರಿಗೆ ಸೇವೆಗಳು ಮತ್ತಷ್ಟು ಆಧುನೀಕರಿಸುತ್ತವೆ ಎಂದು ಅಲ್ಲಿನ ಸಾರಿಗೆ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
