ಉದಯವಾಹಿನಿ, ಬಾಗಲಕೋಟೆ: ರಬಕವಿ ಬನಹಟ್ಟಿ ತಾಲ್ಲೂಕಿನ ಬಂಡಿಗಣಿ ಗ್ರಾಮದ ಬಸವಗೋಪಾಲ ನೀಲಮಾಣಿಕ ಮಠದ ದಾನೇಶ್ವರ ಸ್ವಾಮೀಜಿ(75) ಲಿಂಗೈಕ್ಯರಾಗಿದ್ದಾರೆ. ಕಳೆದ ಒಂದು ತಿಂಗಳಿನಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಸ್ವಾಮೀಜಿ ಅವರನ್ನು ನಾಲ್ಕು ದಿನದ ಹಿಂದೆ ಬೆಳಗಾವಿಯ ಕೆಎಲ್‌ಇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಗುರುವಾರ ರಾತ್ರಿ 11 ಗಂಟೆಗ ನಿಧನರಾದರು. ದಾಸೋಹ ಚಕ್ರವರ್ತಿ ಅನ್ನದಾನೇಶ್ವರ ಎಂದೇ ಹೆಸರಾಗಿದ್ದ ಇವರಿಗೆ ಬಾಗಲಕೋಟೆ, ವಿಜಯಪುರ, ಬೆಳಗಾವಿ ಭಾಗದಲ್ಲಿ ಅಪಾರ ಸಂಖ್ಯೆಯಲ್ಲಿ ಭಕ್ತರಿದ್ದಾರೆ.
ಮಧ್ಯಾಹ್ನ ಬೆಳಗಾವಿ ಆಸ್ಪತ್ರೆಯಿಂದ ಪಾರ್ಥೀವ ಶರೀರ ಮೊದಲು ಅವರ ಹುಟ್ಟೂರು ಬೆಳಗಾವಿ ಜಿಲ್ಲೆ ಸವದಿ ಗ್ರಾಮಕ್ಕೆ ತರಲಾಗುತ್ತದೆ.
ನಂತರ ರಾತ್ರಿ ಬಂಡಿಗಣಿ ಗ್ರಾಮದ ಮಠಕ್ಕೆ ತಂದು ನಾಳೆ ಸಂಜೆ 4 ಗಂಟೆಯವರೆಗೆ ಮಠದ ಆವರಣದಲ್ಲಿ ಅಂತಿಮ ದರ್ಶನಕ್ಕೆ ಅವಕಾಶ ನೀಡಲಾಗುತ್ತದೆ. ನಾಳೆ ಸಂಜೆ 4 ಗಂಟೆಗೆ ವೀರಶೈವ ಲಿಂಗಾಯತ ವಿಧಿವಿಧಾನ ಪ್ರಕಾರ ಅಂತ್ಯಸಂಸ್ಕಾರ ನಡೆಸಲಾಗುತ್ತದೆ.
ಕಳೆದ ಅಕ್ಟೋಬರ್ 13 ರಂದು ಬಂಡಿಗಣಿ ಮಠದಲ್ಲಿ ವಿಶ್ವಾಶಾಂತಿಗಾಗಿ ಸರ್ವಧರ್ಮ ಮಹಾಸಂಗಮ ಸಮಾವೇಶ ನಡೆಸಲಾಗಿತ್ತು. ಈ ಸಮಾವೇಶಕ್ಕೆ ಸಿಎಂ ಸಿದ್ದರಾಮಯ್ಯ ಆಗಮಿಸಿದ್ದರು. ಬರೀ ಕರ್ನಾಟಕದಲ್ಲಿ ಮಾತ್ರವಲ್ಲ ಹೊರ ರಾಜ್ಯದಲ್ಲೂ ಕೂಡ ಅನ್ನದಾನ ಮಾಡಿದ್ದಾರೆ ಎಂದು ಸಿಎಂ ಹಾಡಿ ಹೊಗಳಿದ್ದರು.
