
ಉದಯವಾಹಿನಿ, ಮಂಡ್ಯ: ಸುಮಾರು 15 ತಿಂಗಳಿಂದ ವೇತನ ಸಿಗದೇ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದ ಮಂಡ್ಯದ ಮೈಶುಗರ್ ಶಾಲೆಯ ಶಿಕ್ಷಕರ ಬಾಕಿ ವೇತನಕ್ಕಾಗಿ ಕೇಂದ್ರ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು, ತಮ್ಮ ಸಂಸದರ ವೇತನವನ್ನೇ ನೀಡಿದ್ದಾರೆ. ಈ ಮೊದಲು ನೀಡಿದ್ದ ಭರವಸೆಯಂತೆ ಶನಿವಾರ ಬೆಳಗ್ಗೆ ಶಾಲೆಗೆ ಭೇಟಿ ನೀಡಿದ ಸಚಿವರು, ಇಂದು 19,94,200 ಮೊತ್ತದ ಚೆಕ್ ಅನ್ನು ಶಾಲೆಯ ಆಡಳಿತ ಮಂಡಳಿಗೆ ಹಸ್ತಾಂತರ ಮಾಡಿದರು. ಈ ಸಂದರ್ಭದಲ್ಲಿ ಶಿಕ್ಷಕರು ಸಚಿವರಿಗೆ ಧನ್ಯವಾದ ಹೇಳಿದರು. ಇದಕ್ಕೆ ಸ್ಪಂದಿಸಿದ ಸಚಿವರು, ವೇತನವಿಲ್ಲದೆ ಕೆಲಸ ಮಾಡುವುದು ಕಷ್ಟ. ನೀವು ನೋವು ನನಗೆ ಅರ್ಥವಾಗಿದೆ. ಹೀಗಾಗಿ ನಿಮ್ಮ ಕಷ್ಟಕ್ಕೆ ಸ್ಪಂದಿಸುತ್ತೇನೆ ಎಂದು ಮಾತು ಕೊಟ್ಟಿದ್ದೆ. ನಿಮಗೆ ಕೊಟ್ಟ ಮಾತು ಉಳಿಸಿಕೊಂಡಿದ್ದೇನೆ ಎಂದು ತಿಳಿಸಿದರು.
ಇದು ಐತಿಹಾಸಿಕ ಶಾಲೆ, ಮಂಡ್ಯದ ಇತಿಹಾಸದಲ್ಲಿ ಈ ಶಾಲೆಗೂ ಒಂದು ಸ್ಥಾನವಿದೆ. ಹೀಗಾಗಿ ಶಾಲೆ ಸಂಕಷ್ಟಕ್ಕೆ ಸಿಲುವುದು ನನಗೆ ಇಷ್ಟವಿಲ್ಲ. ಈ ಶಾಲೆಯನ್ನು ಉಳಿಸುವ ಬಗ್ಗೆ ರಾಜ್ಯ ಸರ್ಕಾರಕ್ಕೂ ಮನವಿ ಮಾಡುತ್ತೇನೆ. ಪಿಯುಸಿವರೆಗೆ ಈ ಶಾಲೆಯಲ್ಲಿ ಶಿಕ್ಷಣ ದೊರೆಯಲಿ. ನಾನು ಕೂಡ ಶಾಲೆಯ ಉಳಿವಿಗೆ ಕೈ ಜೋಡಿಸುತ್ತೇನೆ. ಆದಿಚುಂಚನಗಿರಿ ಶ್ರೀಗಳೊಂದಿಗೂ ಈ ಬಗ್ಗೆ ಮಾತಾಡಿದ್ದೇನೆ. ಒಂದೇ ರಾತ್ರಿಯಲ್ಲಿ ಅಭಿವೃದ್ಧಿ ಮಾಡುತ್ತೇನೆ ಎಂದು ನಾನು ಹೇಳಲ್ಲ. ಹಂತ ಹಂತವಾಗಿ ಶಾಲೆಯ ಅಭಿವೃದ್ಧಿ ಮಾಡೋಣ. ಈ ಶಾಲೆಯಲ್ಲಿ ಗುಣಮಟ್ಟದ ಶಿಕ್ಷಣ ನೀಡಲಿ ಎಂದು ಕೇಳುತ್ತೇನೆ. ಮಂಡ್ಯದಲ್ಲಿ ಮೈಶುಗರ್ ಶಾಲೆಯೇ ನಂ.1 ಶಾಲೆ ಆಗಿರಬೇಕು ಎಂಬುದು ನನ್ನ ಆಶಯವಾಗಿದೆ ಎಂದು ಹೇಳಿದರು.
