ಉದಯವಾಹಿನಿ, ನವದೆಹಲಿ: ಪಾಕಿಸ್ತಾನಿ ಮಹಿಳೆಯೊಬ್ಬರು ತಮ್ಮ ಪತಿ ಕರಾಚಿಯಲ್ಲಿ ತನ್ನನ್ನು ಕೈಬಿಟ್ಟು ದೆಹಲಿಯಲ್ಲಿ ರಹಸ್ಯವಾಗಿ ಎರಡನೇ ಮದುವೆಗೆ ಸಿದ್ಧತೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೇ, ನನಗೆ ನ್ಯಾಯ ಕೊಡಿಸಿ ಎಂದು ಪ್ರಧಾನಿ ಮೋದಿ ಅವರಿಗೆ ಮನವಿ ಮಾಡಿದ್ದಾರೆ. ನಿಕಿತಾ ನಾಗ್ದೇವ್ ಹೆಸರಿನ ಮಹಿಳೆ, ಪ್ರಧಾನಿ ನರೇಂದ್ರ ಮೋದಿಯವರಿಂದ ನ್ಯಾಯ ಕೋರಿ ಸೋಷಿಯಲ್ ಮೀಡಿಯಾದಲ್ಲಿ ವೀಡಿಯೋ ಹಂಚಿಕೊಂಡಿದ್ದಾರೆ.
ಕರಾಚಿ ನಿವಾಸಿ ನಿಕಿತಾ, ದೀರ್ಘಾವಧಿಯ ವೀಸಾದ ಮೇಲೆ ಇಂದೋರ್‌ನಲ್ಲಿ ವಾಸಿಸುತ್ತಿದ್ದ ಪಾಕಿಸ್ತಾನಿ ಮೂಲದ ವ್ಯಕ್ತಿ ವಿಕ್ರಮ್ ನಾಗ್ದೇವ್ ಅವರನ್ನು 2020ರ ಜನವರಿ 26 ರಂದು ಕರಾಚಿಯಲ್ಲಿ ಹಿಂದೂ ಪದ್ಧತಿಗಳ ಪ್ರಕಾರ ವಿವಾಹವಾಗಿದರು. ಒಂದು ತಿಂಗಳ ನಂತರ, ವಿಕ್ರಮ್ ಭಾರತಕ್ಕೆ ಬಂದರು. ಅಲ್ಲಿಂದಾಚೆಗೆ ನನ್ನ ಜೀವನವೇ ಹಾಳಾಗಿದೆ ಎಂದು ನಿಕಿತಾ ಆರೋಪಿದ್ದಾರೆ. ಭಾರತಕ್ಕೆ ಬರಲು ಸಾಕಷ್ಟು ಬಾರಿ ಪ್ರಯತ್ನಿಸಿದೆ. 2020 ರಲ್ಲಿ ವೀಸಾ ವಿಚಾರಕ್ಕಾಗಿ ನನ್ನನ್ನು ಅಟ್ಟಾರಿ ಗಡಿಯಲ್ಲೇ ತಡೆದು ಪಾಕಿಸ್ತಾನಕ್ಕೆ ವಾಪಸ್ ಕಳುಹಿಸಲಾಯಿತು. ಅಂದಿನಿಂದ, ನನ್ನನ್ನು ಭಾರತಕ್ಕೆ ಕರೆಸಿಕೊಳ್ಳುವಂತೆ ವಿಕ್ರಮ್‌ಗೆ ಮನವಿ ಮಾಡುತ್ತಿದ್ದೇನೆ. ಆದರೆ, ಪ್ರತಿ ಬಾರಿಯೂ ಆತ ನಿರಾಕರಿಸುತ್ತಲೇ ಇದ್ದಾನೆ ಎಂದು ವೀಡಿಯೋದಲ್ಲಿ ಭಾವನಾತ್ಮಕವಾಗಿ ಮಹಿಳೆ ಮಾತನಾಡಿದ್ದಾರೆ.
