ಉದಯವಾಹಿನಿ, ಲಕ್ನೋ: 9 ರಾಜ್ಯಗಳು ಮತ್ತು ಮೂರು ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಪ್ರಕ್ರಿಯೆ, ಬೂತ್ ಹಂತದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳ ಮೇಲೆ ತೀವ್ರ ಒತ್ತಡ ಹಾಗೂ ಆತಂಕ ಸೃಷ್ಟಿಸುತ್ತಿರುವ ಬಗ್ಗೆ ವರದಿಗಳು ಬೆಳಕಿಗೆ ಬರುತ್ತಲೇ ಇವೆ. ಇದಕ್ಕೆ ಉತ್ತರ ಪ್ರದೇಶದಲ್ಲಿ ನಡೆದಿರುವ ಘಟನೆ ಮತ್ತೊಂದು ತಾಜಾ ಉದಾಹರಣೆಯಾಗಿದೆ.
ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ಕರ್ತವ್ಯಕ್ಕೆ ಬೂತ್ ಮಟ್ಟದ ಅಧಿಕಾರಿಯಾಗಿ ನಿಯೋಜಿಸಿದ್ದ ಜೀವಶಾಸ್ತ್ರ ಶಿಕ್ಷಕ ಮಿದುಳಿನ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾರೆ. ಮೋದಿ ವಿಜ್ಞಾನ ಮತ್ತು ವಾಣಿಜ್ಯ ಅಂತರ ಕಾಲೇಜಿನ ಶಿಕ್ಷಕ ಲಾಲ್ ಮೋಹನ್ ಸಿಂಗ್ (58) ಮೃತ ದುರ್ದೈವಿ. ಉತ್ತರ ಪ್ರದೇಶದ ಮೋದಿ ನಗರದಲ್ಲಿರುವ ತಮ್ಮ ನೆಹರು ನಿವಾಸದಲ್ಲಿ ಮಿದುಳಿನ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾರೆ ಎಂದು ಜಿಲ್ಲಾಡಳಿತದ ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಕಾಲೇಜು ಪ್ರಾಂಶುಪಾಲ ಸತೀಶ್ ಚಂದ್ ಅಗರ್ವಾಲ್, ಮೋಹನ್ ಸಿಂಗ್ ಅವರಿಗೆ ಸಾಹಿಬಾಬಾದ್ ವಿಧಾನಸಭಾ ಕ್ಷೇತ್ರದಲ್ಲಿ SIR ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಪರಿಷ್ಕರಣೆ ಕೆಲಸದಿಂದ ತೀವ್ರ ಒತ್ತಡಕ್ಕೆ ಸಿಲುಕಿದ್ದರು. ಏಕೆಂದ್ರೆ ಏನಾದ್ರೂ ಮಾಡಿಕೊಳ್ಳಿ ಕೆಲಸ ಪೂರ್ಣಗೊಳಿಸಲೇಬೇಕೆಂದು ಜಿಲ್ಲಾಡಳಿತ ಎಚ್ಚರಿಕೆ ನೀಡಿತ್ತು. ಹೀಗಾಗಿ ಅವರು ತೀರಾ ಒತ್ತಡಕ್ಕೆ ಸಿಲುಕಿ ಅಸ್ವಸ್ಥರಾಗಿದ್ದರು. ಮೆದುಳಿನ ರಕ್ತಸ್ರಾವದಿಂದ ಸಾವನ್ನಪ್ಪಿದ್ದಾರೆ. ಬಳಿಕ ಎಸ್‌ಡಿಎಂ ಪೊಲೀಸರಿಗೆ ಮಾಹಿತಿ ನೀಡಿದೆ ಎಂದು ತಿಳಿಸಿದ್ದಾರೆ. ಇನ್ನೂ ಮೃತದೇಹವನ್ನ ಮರಣೋತ್ತರ ಪರೀಕ್ಷೆ ಬಳಿಕ ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ ಎಂದು ಮೋದಿನಗರದ ಸಹಾಯಕ ಪೊಲೀಸ್ ಆಯುಕ್ತ ಅಮಿತ್ ಸಕ್ಸೇನಾ ತಿಳಿಸಿದ್ದಾರೆ.
