ಉದಯವಾಹಿನಿ, ನವದೆಹಲಿ: ರಾಜ್ಯದ ಸಿಎಂ ಕುರ್ಚಿ ಕದನ ಹೈಕಮಾಂಡ್ ಅಂಗಳ ತಲುಪಿದ್ದು, ಸೋನಿಯಾ ಗಾಂಧಿ (Sonia Gandhi) ನೇತೃತ್ವದಲ್ಲಿ ನಡೆದ ಸಭೆಯು ಅಪೂರ್ಣವಾಗಿದೆ. ಸಭೆಯಲ್ಲಿ ಯಾವುದೇ ನಿರ್ಧಾರ ಕೈಗೊಳ್ಳದೇ ತಟಸ್ಥ ನಿಲುವು ತಳೆಯಲಾಗಿದೆ.
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಬಡಿದಾಟ ಕದನ ಕುತೂಹಲವಾಗಿದ್ದು, ಸಿಎಂ ಆಗಿ ಸಿದ್ದರಾಮಯ್ಯ ಮುಂದುವರೀತಾರಾ..? ಡಿಕೆಶಿಗೆ ಕುರ್ಚಿ ಬಿಟ್ಟು ಕೊಡ್ತಾರಾ ಅನ್ನೋದು ಯಕ್ಷ ಪ್ರಶ್ನೆಯಾಗಿದೆ. ಎರೆಡೆರಡು ಬಾರಿ ಬ್ರೇಕ್‌ಫಾಸ್ಟ್ ಮೀಟಿಂಗ್ ಮಾಡಿ ಸಿಎಂ-ಡಿಸಿಎಂ ಇಬ್ಬರೂ ಒಗ್ಗಟ್ಟು ಪ್ರದರ್ಶಿಸಿದ್ದಾರೆ. ನಾಟಿಕೋಳಿ ನಾಷ್ಟಾ ಸವಿದು ಎಲ್ಲವೂ ಹೈಕಮಾಂಡ್ ತೀರ್ಮಾನಕ್ಕೆ ಬಿಟ್ಟಿದ್ದಾರೆ. ಕಾಂಗ್ರೆಸ್‌ನಲ್ಲಿ ತಲೆದೂರಿರುವ ಸಿಎಂ ಕುರ್ಚಿ ಕಲಹಕ್ಕೆ ಮುಲಾಮು ಹಚ್ಚಲು ಇವತ್ತು ಸಂಜೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ಸಭೆ ನಡೆದಿದೆ. ಸಭೆಯಲ್ಲಿ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಕೆ.ಸಿ.ವೇಣುಗೋಪಾಲ್ ಭಾಗಿಯಾಗಿದ್ದರು.
ಎರಡು ಗಂಟೆಗಳ ಕಾಲ ನಡೆದ ಸಭೆಯಲ್ಲಿ ಸೋನಿಯಾ ಗಾಂಧಿ ಸಿಎಂ-ಡಿಸಿಎಂ ಬಣಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ. ಆದರೆ, ಯಾವುದೇ ನಿರ್ಧಾರಕ್ಕೆ ಬರಲಿಲ್ಲ. ಇಂದಿನ ಸಭೆ ಅಪೂರ್ಣವಾಗಿದೆ. ಸದ್ಯಕ್ಕೆ ಯಾವುದೇ ನಿರ್ಧಾರ ಕೈಗೊಳ್ಳದೆ ತಟಸ್ಥ ನಿಲುವು ತಳೆಯಲಾಗಿದೆ. ಮತ್ತೊಂದು ಸುತ್ತಿನ ಸಭೆ ನಡೆಸಲು ನಿರ್ಧಾರ ಮಾಡಲಾಗಿದೆ. ಸಭೆ ಬಳಿಕ ಮಾತನಾಡಿದ ಕೆ.ಸಿ ವೇಣುಗೋಪಾಲ್, ಸಭೆಯಲ್ಲಿ ಕರ್ನಾಟಕ ವಿಚಾರ ಪ್ರಸ್ತಾಪವಾಗಿದೆ. ಸಭೆಯಲ್ಲಿ ಯಾವುದೇ ಅಂತಿಮ ನಿರ್ಧಾರಕ್ಕೆ ಬಂದಿಲ್ಲ. ಮತೊಂದು ಸುತ್ತಿನ ಸಭೆ ನಡೆಸಲು ನಿರ್ಧರಿಸಲಾಗಿದೆ ಎಂದಿದ್ದಾರೆ.

Leave a Reply

Your email address will not be published. Required fields are marked *

error: Content is protected !!