ಉದಯವಾಹಿನಿ, ಲಂಡನ್: ಯುಕೆಯಲ್ಲಿರುವ ಅಕ್ರಮ ವಲಸಿಗರ ಮೇಲೆ ಕಡಿವಾಣ ಹಾಕಲು ಕ್ರಮಗಳನ್ನು ಜರುಗಿಸುತ್ತಿರುವ ಯುಕೆ ಸರ್ಕಾರ ನಡೆಸಿರುವ ವ್ಯಾಪಕ ಕಾರ್ಯಚರಣೆಯಲ್ಲಿ ಅಕ್ರಮವಾಗಿ ಕೆಲಸ ಮಾಡುತ್ತಿದ್ದ ಸುಮಾರು 171 ಡೆಲಿವರಿ ರೈಡರ್‌ಗಳನ್ನು ಬಂಧಿಸಿದ್ದಾರೆ. ಇದರಲ್ಲಿ ಭಾರತೀಯರು ಸಹ ಸೇರಿದ್ದು, ಇವರನ್ನು ದೇಶದಿಂದ ಗಡಿಪಾರು ಮಾಡಲಿದ್ದೇವೆ ಎಂದು ಬ್ರಿಟಿಷ್ ಸರ್ಕಾರ ತಿಳಿಸಿದೆ.
ಬ್ರಿಟನ್‌ನಲ್ಲಿ ʼಆಪರೇಷನ್ ಈಕ್ವಲೈಸ್ʼ
ಕಳೆದ ತಿಂಗಳು, ಬ್ರಿಟನ್‌ನಾದ್ಯಂತ ವಲಸೆ ಜಾರಿ ಅಧಿಕಾರಿಗಳು ‘ಆಪರೇಷನ್ ಈಕ್ವಲೈಸ್’ ಎಂಬ ಕಾರ್ಯಾಚರಣೆಯನ್ನು ಏಳು ದಿನಗಳ ಕಾಲ ನಡೆಸಿದರು. ಈ ಕಾರ್ಯಾಚರಣೆಯಲ್ಲಿ, ಹಳ್ಳಿಗಳು, ಪಟ್ಟಣಗಳು ಮತ್ತು ನಗರಗಳಲ್ಲಿ ಡೆಲಿವರಿ ಕೆಲಸ ಮಾಡುತ್ತಿದ್ದ ರೈಡರ್‌ಗಳ ದಾಖಲೆಗಳನ್ನು ಪರಿಶೀಲಿಸಿ, ಅಕ್ರಮವಾಗಿ ಕೆಲಸ ಮಾಡುತ್ತಿದ್ದವರನ್ನು ಸ್ಥಳದಲ್ಲೇ ಬಂಧಿಸಿ, ಅವರ ದೇಶಗಳಿಗೆ ಗಡಿಪಾರು ಮಾಡಲು ನಿರ್ಧರಿಸಲಾಗಿದೆ. ಈ ಅಕ್ರಮ ಕೆಲಸಗಾರರಲ್ಲಿ ಭಾರತೀಯರು ಸೇರಿದಂತೆ ಬಾಂಗ್ಲಾದೇಶ ಮತ್ತು ಚೀನಾದವರು ಇದ್ದಾರೆ ಎಂದು ತಿಳಿದುಬಂದಿದೆ. ಈ ಕುರಿತು ಮಾಹಿತಿ ನೀಡಿದ ಯುಕೆ ಗಡಿ ಭದ್ರತಾ ಸಚಿವ ಅಲೆಕ್ಸ್ ನಾರ್ರಿಸ್ ನೀವು ಈ ದೇಶದಲ್ಲಿ ಅಕ್ರಮವಾಗಿ ಕೆಲಸ ಮಾಡುತ್ತಿದ್ದರೆ, ನಿಮ್ಮನ್ನು ಬಂಧಿಸಿ ಗಡಿಪಾರು ಮಾಡಲಾಗುತ್ತದೆ ಎಂಬ ಸ್ಪಷ್ಟ ಸಂದೇಶವನ್ನು ಈ ಕಾರ್ಯಚರಣೆ ನೀಡುತ್ತದೆ ಎಂದು ತಿಳಿಸಿದ್ದಾರೆ. ಬ್ರಿಟಿಷ್ ಗೃಹ ಇಲಾಖೆ ಕಾರ್ಯಚರಣೆಯ ಕುರಿತು ವಿವರಿಸಿ ನ.17ರಂದು ಪೂರ್ವ ಲಂಡನ್‌ನ ನ್ಯೂಹ್ಯಾಮ್‌ನ ಹೈ ಸ್ಟ್ರೀಟ್‌ನಲ್ಲಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದು,ಅಲ್ಲಿ ಬಾಂಗ್ಲಾದೇಶ ಮತ್ತು ಭಾರತೀಯ ರಾಷ್ಟ್ರೀಯತೆ ಹೊಂದಿದ್ದು, ಅಕ್ರಮವಾಗಿ ಕೆಲಸಮಾಡುತ್ತಿದ್ದ 4 ರೈಡರ್‌ಗಳನ್ನು ಅಕ್ರಮ ಕೆಲಸಕ್ಕಾಗಿ ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ. ಇದೇ ರೀತಿ ನ.25ರಂದು ಪೂರ್ವ ಇಂಗ್ಲೆಂಡ್‌ನ ನಾರ್ವಿಚ್ ನಗರ ಕೇಂದ್ರದಲ್ಲಿ ಕಾರ್ಯಾಚರಣೆ ನಡೆಸಿದ್ದು ಆಗ 3 ಭಾರತೀಯ ರೈಡರ್‌ಗಳನ್ನು ಬಂಧಿಸಲಾಗಿದೆ. ಇವರಲ್ಲಿ 2 ಗಡಿಪಾರು ಮಾಡಲು ಬಂಧಿಸಿಡಲಾಗಿದ್ದು, ಮೂರನೇ ವ್ಯಕ್ತಿಗೆ ಕಟ್ಟುನಿಟ್ಟಾದ ವಲಸೆ ಜಾಮೀನು ನೀಡಲಾಗಿದೆ ಎಂದು ತಿಳಿಸಿದ್ದಾರೆ. ನಾರ್ರಿಸ್ ಫುಡ್ ಡೆಲಿವರಿ ಕಂಪನಿಗಳಾದ ಡೆಲಿವೆರೊ, ಜಸ್ಟ್ ಈಟ್, ಉಬರ್ ಈಟ್ಸ್ ನ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ, ತಮ್ಮ ಪ್ಲಾಟ್‌ಫಾರ್ಮ್‌ಗಳಲ್ಲಿ ಅಕ್ರಮ ಕೆಲಸವನ್ನು ತಡೆಯಲು ಕೈಗೊಂಡ ಕ್ರಮಗಳು ಹಾಗೂ ಮುಂದಿನ ಹಂತದ ಕಾರ್ಯಚರಣೆಗಳ ಕುರಿತು ಚರ್ಚೆ ನಡೆಸಿದ್ದಾರೆ.
